ಬೆಂಗಳೂರಿನ ಕಲಾಗ್ರಾಮದಲ್ಲಿ ಗೆಳೆಯರೊಂದಿಗೆ “ಮರೆತ ದಾರಿ” ಯ ಕಾಣಲು ಹೊರಟೆವು. ತಾಯಿ ಕೊರವಿ ಯಿಂದ ಶುರುವಾದ ಹುಡುಕಾಟ ಕಾಲಾಂತರವನ್ನೇ ದಾಟಿಸಿತು. ನಮ್ಮ ನೆನಪುಗಳಿಗೆ ಆಗಿರುವ ವೈರಸ್ ಗಳ ದಾಳಿಯ ಅಪಾಯ. ನಮ್ಮ ಮೂಲವನ್ನೇ ಮರೆತು ಅನ್ಯದನ್ನು ಹೊತ್ತು ಮೆರೆಸುತ್ತಿರುವ ಈ ಸಮಯದಲ್ಲಿ ನಾವು ಹೊರಳಿಕೊಳ್ಳಬೇಕಾದ, ನಮ್ಮದನ್ನು ಕಂಡುಕೊಳ್ಳುವ ಅಂಶವನ್ನು ಶೋಧನಾತ್ಮಕವಾಗಿ ನಾಟಕದಲ್ಲಿ ಕಟ್ಟಲಾಗಿದೆ.
ಇದರ ಅಧ್ಯಯನದಲ್ಲಿ ಸರಿಸುಮಾರು ಒಂದು ಒಂದೂವರೆ ದಶಕದಿಂದ ಹಿರಿಯ ಚಿಂತಕರಾದ ಲಕ್ಷ್ಮಿಪತಿ ಕೋಲಾರ ಅವರು ನಡೆಯುತ್ತಿದ್ದಾರೆ. ಅವರ ಮೂರ್ನಾಲ್ಕು ದಿನದ ಈ ಉಪನ್ಯಾಸವನ್ನು PPT ಮೂಲಕ ನೋಡಿ ರೋಮಾಂಚನಗೊಂಡಿದ್ದೆವು. ಅಂಥ ತಾತ್ವಿಕ ವಿಚಾರಗಳನ್ನು ನಾಟಕವಾಗಿಸುವುದು ದೊಡ್ಡ ಸವಾಲು.
ಬಹುದೊಡ್ಡ ಪ್ರಯಾಣವನ್ನು ಕಾಣಿಸುವುದು ಪ್ರಯಾಸವೇ. ಕಾಲಾಂತರವನ್ನು ದಾಟಿ ಬಂದಿರುವ ಈ ಯಾನವನ್ನು ರಂಗಕ್ಕೆ ಅಳವಡಿಸುವುದು, ದ.ಆಫ್ರಿಕಾದಿಂದ ಸಾಗಿ ಬಂದಿರುವ ದಾರಿಗೆ ನಕಾಶೆಯನ್ನು ಹುಡುಕಿ ತೋರುವುದು ಸಾಮಾನ್ಯವಲ್ಲ. ಅಂಥ ಸವಾಲನ್ನು ಗೆಳೆಯ ಉದಯ್ ಸೋಸ್ಲೇ ಎದುರುಗೊಂಡಿದ್ದಾರೆ. ಅದರಲ್ಲಿ ಯಶಸ್ವಿಯಾಗಿದ್ದಾರೆ. ನಟರು ಇಂಥದ್ದೊಂದು ಯಾನದಲ್ಲಿ ನಮ್ಮನ್ನೆಲ್ಲ ಕರೆದೊಯ್ಯಲು ಯಾತ್ರಿಕರಾಗಿ ನಿಂತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು.
ಇಂಥದ್ದೊಂದು ಅರಿವಿನ ಜಿಗಿತದಲ್ಲಿ ಇಡೀ ಜಗತ್ತೇ ತಯಾರುಗೊಳ್ಳಬೇಕಿದೆ. ಮುಂದಿನ ಈ ದಾರಿಯನ್ನು ಎದುರುಗೊಳ್ಳಲು ನಾವು ಉತ್ಸುಕರಾಗಿ ಆಸೆಗಣ್ಣಿನಿಂದ ಕಾಯುತ್ತಿದ್ದೇವೆ.
ರವಿಕುಮಾರ್ ನೀ.ಹ. ಲೇಖಕರು