Thursday, September 19, 2024
Google search engine
Homeಮುಖಪುಟಪ್ರಜಾಪ್ರಭುತ್ವ ದಿನಾಚರಣೆ: ಮಾನವ ಸರಪಳಿ ಯಶಸ್ವಿ

ಪ್ರಜಾಪ್ರಭುತ್ವ ದಿನಾಚರಣೆ: ಮಾನವ ಸರಪಳಿ ಯಶಸ್ವಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ(ಸೆ.15)ದಂದು ರಾಜ್ಯದಾದ್ಯಂತ ಬೀದರ್‌ನಿಂದ ಚಾಮರಾಜನಗರದವರೆಗೆ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಏಕ ಕಾಲದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಲಾಯಿತು. ಲಕ್ಷಾಂತರ ಮಂದಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಬ್ಬರಿಗೊಬ್ಬರು ಕೈಹಿಡಿದು ಏಕತೆ ಪ್ರದರ್ಶಿಸಿದರು.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಉಜ್ಜನಕುಂಟೆ ಗ್ರಾಮದಿಂದ ಪ್ರಾರಂಭಿಸಿ ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ತುಮಕೂರು ತಾಲ್ಲೂಕು ನಂದಿಹಳ್ಳಿ ಗ್ರಾಮದ ಗಡಿಯವರೆಗೆ ಮಾನವ ಸರಪಳ ರಚಿಸಲಾಯಿತು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಮಾನವ ಸರಪಳಿಯಲ್ಲಿ ಜಿಲ್ಲೆಯ ಎಲ್ಲಾ ಹಿಂದುಳಿದ, ಅಲ್ಪ ಸಂಖ್ಯಾತ, ಯುವಕ ಸಂಘಟನೆ, ವಿಶ್ವ ವಿದ್ಯಾನಿಲಯದ ಸದಸ್ಯ ಸಂಘ, ಸಾಂಸ್ಕೃತಿಕ ಕಲಾ ಸಂಘ, ಕಲಾವಿದರ ಸಂಘ, ಸಹಕಾರ ಸಂಘ, ಹಾಲು ಒಕ್ಕೂಟ ಸಹಕಾರ ಸಂಘ, ಸ್ತ್ರೀ ಶಕ್ತಿ ಸಂಘ, ರೈತ ಪರ, ದಲಿತ ಪರ, ಪ್ರಗತಿ ಪರ, ಮಹಿಳಾ ಪರ, ಕನ್ನಡ ಪರ, ವಿವಿಧ ಸಮುದಾಯ ಪರ ಸಂಘಗಳು, ಕನ್ನಡ ಸಾಹಿತ್ಯ ಪರಿಷತ್ತು, ಸ್ವಯಂ ಸೇವಾ ಸಂಸ್ಥೆಗಳು, ನೌಕರರ ಸಂಘ, ವಿದ್ಯಾರ್ಥಿ ಪರ ಸಂಘಟನೆಗಳಾದ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್, ಯುವ ಕೇಂದ್ರ ಹಾಗೂ ವಿವಿಧ ಉದ್ದೇಶಗಳಿಗಾಗಿ ರಚಿತವಾಗಿರುವ ಸಮಸ್ತ ಸಂಘ ಸಂಸ್ಥೆಗಳ ಸದಸ್ಯರು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಉಪನ್ಯಾಸಕರು, ಪ್ರಾಧ್ಯಾಪಕರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದಕ್ಕೆ ಬಲ ತಂದುಕೊಟುವ ಕೆಲಸ ಮಾಡಿದರು.

ಶಿರಾ ತಾಲ್ಲೂಕಿನ ಉಜ್ಜನ ಕುಂಟೆ ಗ್ರಾಮದಿಂದ ತುಮಕೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರೆಗೆ 90 ಕಿ.ಮೀ ಉದ್ದದ ಮಾನವ ಸರಪಳಿಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು.

ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಯುವಕರು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಪಾಲ್ಗೊಂಡಿರುವುದು ಶ್ಲಾಘನೀಯ. ಹೀಗಾಗಿ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಬೇಕು ಎಂದರು.

ಮಾನವೀಯ ನೆಲೆಯಲ್ಲಿ ಮೌಲ್ಯಯುತವಾದ ಜೀವನವನ್ನು ರೂಪಿಸಿಕೊಳ್ಳಬೇಕು ಮತ್ತೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು. ನಾವು ಸಮಾನತೆಯ ಸಮಾಜವನ್ನು ಕಟ್ಟಬೇಕು ಎಂದರೆ, ಪ್ರಜಾಪ್ರಭುತ್ವವೇ ಏಕೈಕ ದಾರಿ. ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳದಿದ್ದರೆ ಸಮಾನತೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದರ ಮೂಲಕ ನಾವು ಮುನ್ನಡೆಯಬೇಕು ಎಂದು ಹೇಳಿದರು.

ಸಂವಿಧಾನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಈ ಮೂಲಕ ಒಳ್ಳೆಯ ಸಮಾಜ ಕಟ್ಟಲು ಮುಂದಾಗಬೇಕು. ಸಂವಿಧಾನದ ಪೀಠಿಕೆಯನ್ನು ಶಾಲೆಯಲ್ಲಿ ಮಾತ್ರ ಹೇಳಿಕೊಡಲಾಗುತ್ತಿತ್ತು. ಆದರೆ ಇಂದು ಸಾರ್ವಜನಿಕವಾಗಿ ಎಲ್ಲರೂ ಸಾಮೂಹಿಕವಾಗಿ ಪೀಠಿಕೆಯನ್ನು ಪಠಣ ಮಾಡುವುದರ ಮೂಲಕ ಹೆಚ್ಚು ಅದರ ಅರ್ಥವನ್ನು ತಿಳಿದುಕೊಂಡು ಎಲ್ಲರ ಗಮನಕ್ಕೆ ತಂದಿದ್ದಾರೆ. ಬಹಳ ಒಳ್ಳೆಯ ಕಾರ್ಯಕ್ರಮ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳು, ಭಾಗವಹಿಸಿದ ಸಾರ್ವಜನಿಕರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಜನಸಂಗ್ರಾಮ ಪರಿಷತ್ ಅಧ್ಯಕ್ಷ ಪಂಡಿತ್ ಜವಹಾರ್, ಪ್ರಜಾಪ್ರಭುತ್ವ ಉಳಿಸಲು ನಾಗರಿಕರು ಸದ ಎಚ್ಚರಿಕೆ ವಹಿಸಬೇಕು. ಸರ್ಕಾರ ತಪ್ಪು ದಾರಿ ಹಿಡಿದಾಗ ಸರಿಯಾದ ಮಾರ್ಗದಲ್ಲಿ ನಡೆಯಲು ಸರ್ಕಾರಕ್ಕೆ ಕಿವಿಹಿಂಡಬೇಕು. ಸಂವಿಧಾನಬದ್ದ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಸ್ವಾಯತ್ತ ಸಂಸ್ಥೆಗಳನ್ನು ಸರಿದಾರಿಗೆ ತರಬೇಕು ಎಂದರು.

ತುಮಕೂರಿನಲ್ಲಿ ಜನಪರ ಚಿಂತಕ ಕೆ.ದೊರೈರಾಜು, ಪರಿಸರವಾದಿ ಸಿ.ಯತಿರಾಜ್, ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಹಾರ್, ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅರುಣ್, ಸಿಪಿಎಂ ಮಾಜಿ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ, ಎಸ್.ಎಫ್ಐ ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ಣ, ಉಪನ್ಯಾಸಕ ಡಾ.ರವಿಕುಮಾರ್ ನೀಹ, ಸಮಾಜ ಸೇವಕ ತಾಜುದ್ದೀನ್ ಶರೀಪ್ ಮೊದಲಾದವರು ಭಾಗವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಂಬಾರಿಯಲ್ಲಿ ಕುಳಿತು ಮಾನವ ಸರಪಳಿಯಲ್ಲಿ ಭಾಗಿಯಾಗಿರುವವರತ್ತ ಕೈಬೀಸುತ್ತಾ ಹೋದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular