ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೆಚೂರಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ.
ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಯೆಚೂರಿ ಮೂರು ಬಾರಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.
ಅತ್ಯಂತ ಕ್ರಿಯಾಶೀಲರಾಗಿದ್ದ ಯೆಚೂರಿ ಬಂಡವಾಳಶಾಹಿ, ಕೋಮುವಾದಿಗಳ ವಿರುದ್ದ ಹೋರಾಟ ನಡೆಸಿದ್ದರು. ಯೆಚೂರು ಅಪಾರ ಸಂಗಾತಿಗಳನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು.
ಆ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರಚನೆಯಲ್ಲಿಯೂ ಅವರದ್ದೇ ಪ್ರಧಾನ ಪಾತ್ರ ಇತ್ತು. ಕಳೆದ ವರ್ಷ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿ, ಶುಭ ಹಾರೈಸಿದ್ದರು ಎಂದು ಸ್ಮರಿಸಿದ್ದಾರೆ.
ಈಗಿನ ‘ಇಂಡಿಯಾ’ ಒಕ್ಕೂಟ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಇದೆ. ಸೀತಾರಾಮ್ ಯಚೂರಿ ಅವರ ನಿಧನದಿಂದ ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಯಚೂರಿ ಅವರ ಕುಟುಂಬ ಮತ್ತು ಸಂಗಾತಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.