ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ನೋಡದೆ ತಿಪ್ಪೆಗೆ ಕಸ ಹಾಕಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದ್ವಾರನಹಳ್ಳಿಯಲ್ಲಿ ನಡೆದಿದೆ. ಮೃತನನ್ನು 10ನೇ ತರಗತಿ ವಿದ್ಯಾರ್ಥಿ ಸಾಗರ್ ಎಂದು ಗುರುತಿಸಲಾಗಿದೆ.
ದುರಂತವೆಂದರೆ ಸಾಗರ್, ತನ್ನ ತಾಯಿಯ ಎದುರೇ ತನ್ನ ಅಂತ್ಯ ಕಂಡಿದ್ದಾನೆ. ಸಾಗರ್ ದ್ವಾರನಹಳ್ಳಿಯ ರವಿಕುಮಾರ್ ಮತ್ತು ಮನು ದಂಪತಿಯ ಪುತ್ರ. ಇಲ್ಲಿಯ ಜೆಪಿ ಆಂಗ್ಲ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ.
ಶನಿವಾರ 11.45ರವರೆಗೂ ಶಾಲೆಯಲ್ಲೇ ಇದ್ದು ಪರೀಕ್ಷೆ ಬರೆದಿದ್ದ ಸಾಗರ್ ತದ ನಂತರ ಮನೆಗೆ ಹಿಂತಿರುಗಿದ್ದಾನೆ. ತನ್ನ ತಂದೆ ರವಿಕುಮಾರ್ ಅನಾರೋಗ್ಯ ನಿಮ್ಮಿತ್ತ ಆಸ್ಪತ್ರೆಗೆ ತೆರಳಿದ್ದರು. ಆ ವೇಳೆ ಮನೆಯಲ್ಲಿದ್ದ ಸಗಣಿಯನ್ನು ತನ್ನ ತಾಯಿಯ ಜೊತೆಗೆ ತೆರಳಿ ತಿಪ್ಪೆಗೆ ಹಾಕಲು ಸಾಗರ್ ತೆರಳಿದ್ದ. ಆ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಕಾಣದೇ ಸಾಗರ್ ತುಳಿದಿದ್ದಾನೆ. ಆ ಕ್ಷಣವೇ ಸಾಗರ್ ಕೆಳಗೆ ಬಿದ್ದು ಕೊನೆಯುಸಿರೆಳೆದನೆಂದು ಹೇಳಲಾಗಿದೆ. ಅಲ್ಲೇ ಇದ್ದ ತಾಯಿ ಮನು ಅವರು ಕೂದಲೆಳೆ ಅಂತರದಿಂದ ಪಾರಾದರೆಂದು ತಿಳಿದುಬಂದಿದೆ.
ಕಳೆದ ಮರ‍್ನಾಲ್ಕು ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಕುರಿತು ಬೆಸ್ಕಾಂನ ಲೈನ್ ಮೆನ್ ಸೇರಿದಂತೆ ಶಾಖಾ ವ್ಯವಸ್ಥಾಪಕರಿಗೂ ತಿಳಿಸಲಾಗಿತ್ತು. ಆದರೂ ಸಹ ಬೆಸ್ಕಾನ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ ಕಾರಣ ಅಮಾಯಕ ಜೀವ ಬಲಿಯಾಗಿದೆ ಎಂದು ದ್ವಾರನಹಳ್ಳಿ ಗ್ರಾಮಸ್ಥರು ಕಿಡಿಕಾರಿದ್ದಾರೆ.
ವಿದ್ಯಾರ್ಥಿ ಸಾಗರ್ ನ ಶವವನ್ನು ನೋಡಲು ಆಗಮಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಶವ ಕಂಡು ಕೆಲ ಕಾಲ ಗದ್ಗತಿತರಾದರು. ವಿದ್ಯುತ್ ತಂತಿ ತುಂಡಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವರನ್ನು ಕೂಡಲೇ ಅಮಾನತಿನಲ್ಲಿಡಬೇಕೆಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಶೇಖರ್ ಅವರಿಗೆ ಸೂಚನೆ ನೀಡಿದರು.
ಅಮಾಯಕ ವಿದ್ಯಾರ್ಥಿ ಸಾಗರ್ ಬೆಸ್ಕಾಂ ನ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರವನ್ನು ಬೆಸ್ಕಾಂನಿಂದ ಕೊಡಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.