ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಗುರುವಾರ ನಡೆದಿದೆ. ಹತ್ಯೆ ಮಾಡಲು ಬಂದ ದುಷ್ಕರ್ಮಿಗಳಿಂದ ಯುವಕ ಜಿ.ಎನ್.ಮನೋಜ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದು ಗುಬ್ಬಿ ಜನರನ್ನು ಬೆಚ್ಚಿ ಬೀಳಿಸಿದೆ.
ಗುಬ್ಬಿ ಪಟ್ಟಣದ ತಹಶೀಲ್ದಾರ್ ಕ್ವಾಟ್ರಸ್ ಮುಂಭಾಗದ ಎಂ.ಜಿ.ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಯುವಕ ಮನೋಜ್ ಬೈಕ್ ನಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಬೈಕ್ ಗೆ ಗುದ್ದಿಸಿದ್ದಾರೆ. ಕೆಳಗೆ ಬಿದ್ದ ಮನೋಜ್ ನನ್ನು ಗುಂಪು ಅಟ್ಟಿಸಿಕೊಂಡು ಹೋಗಿದೆ. ಈ ಸಮಯದಲ್ಲಿ ಮನೋನ್ ತನ್ನ ಸಹೋದರನ ಮನೆಯೊಳಗೆ ಹೋಗಿ ಪ್ರಾಣವನ್ನು ಉಳಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಹತ್ಯೆಗೆ ಒಳಗಾದ ದಲಿತ ನಾಯಕ ಜಿ.ಸಿ.ನರಸಿಂಹಮೂರ್ತಿ ಅವರ 2ನೇ ಪುತ್ರ ಜಿ.ಎನ್.ಮನೋಜ್ ದುಷ್ಕರ್ಮಿಗಳಿಂದ ಪಾರಾಗಿದ್ದಾನೆ.
ಗುಬ್ಬಿ ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನದ ಸಮೀಪದಲ್ಲಿ ವಾಸವಿದ್ದ ಮನೆಯಿಂದ ಮನೋನ್ ಬೈಕ್ ನಲ್ಲಿ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವೇಳೆ ಮೊದಲೇ ಹೊಂಚು ಹಾಕುತ್ತಿದ್ದ ಗುಂಪು ಕಾರಿನಲ್ಲಿ ಬೈಕ್ ಅನ್ನು ಹಿಂಬಾಲಿಸಿದೆ. ಸ್ವಲ್ಪ ದೂರ ಹೋಗುತ್ತಲೇ ಸ್ಕಾರ್ಪಿಯೋ ಕಾರು ಬೈಕ್ ಗೆ ಗುದ್ದಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಕೂಗಾಡಿದ ತಕ್ಷಣವೇ ಸ್ಕಾರ್ಪಿಯೋ ಕಾರು ಬಂದ ವೇಗದಲ್ಲೇ ವಾಪಸ್ಸಾಯಿತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು,ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.