ನಾಡಿನ ಸಾಮಾಜಿಕ ನ್ಯಾಯದ ಹರಿಕಾರರಾಗಿ, ದೀನ ದುರ್ಬಲರ ಆಶಾಕಿರಣವಾಗಿ, ಜೀತ ಹಾಗೂ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಿದ ಧೀಮಂತ ನಾಯಕ ದೇವರಾಜ ಅರಸು ಚಿರಸ್ಮರಣೀಯ ಎಂದು ಕುವೆಂಪು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎಂ.ಗುರುಲಿಂಗಯ್ಯ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಿ. ದೇವರಾಜ ಅರಸು ಅಧ್ಯಯನ ಪೀಠ ಮತ್ತು ಹಿಂದುಳಿದ ವರ್ಗಗಳ ಕೋಶವು ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 109ನೇ ಜಯಂತಿಯಲ್ಲ್ಲಿ ‘ಪ್ರಸಕ್ತ ಸನ್ನಿವೇಶದಲ್ಲಿ ಡಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪ್ರಸ್ತುತತೆ ಕುರಿತು ಅವರು ಮಾತನಾಡಿದರು.
12ನೆಯ ಶತಮಾನದ ಸಾಮಾಜಿಕ ನ್ಯಾಯದ ಪರಿಪಾಲಕ ಬಸವಣ್ಣನವರ ಆದರ್ಶವನ್ನು ಪ್ರತಿಪಾದಿಸಿದ ನಾಯಕ ದೇವರಾಜ ಅರಸು ಅವರು ಡಾ. ಬಿ. ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ತಲುಪಿಸಿ ಸಮ ಸಮಾಜವನ್ನು ರೂಪಿಸುವ, ಸಮಾಜಕ್ಕಾಗಿ ದುಡಿದು ಬದುಕುವ ವಿಕಾಸ ಮನಸ್ಥಿತಿಯಿದ್ದವರು ಎಂದರು.
ಸಾಮಾಜಿಕ ನ್ಯಾಯವು ಸಂವಿಧಾನಕ್ಕೆ ಕಿರೀಟವಿದ್ದಂತೆ. ಉಳ್ಳವರು ಮತ್ತು ಇಲ್ಲದವರ ನಡುವಿನ ವ್ಯತ್ಯಾಸವನ್ನು ಸಮಾನತೆಯ ಧ್ಯೇಯದೊಂದಿಗೆ, ಮೇಲ್ವರ್ಗದವರ ಶೋಷಣೆಯಿಂದ ತುಳಿತಕ್ಕೊಳಗಾದವರ ಧ್ವನಿಯಾಗಿ ಅರಸು ಹಿಂದುಳಿದ ಸಮುದಾಯಗಳ ನಾಯಕರಾಗಿ ಸದಾ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಮಿಲ್ಲರ್ ಸಮಿತಿಯ ವರದಿ ಪ್ರಕಾರ 1921ರಲ್ಲಿ ಸಾಮಾಜಿಕ ನ್ಯಾಯದ ಕಾನೂನನ್ನು ದೇಶದಲ್ಲಿ ಅನುಷ್ಠಾನಗೊಳಿಸಲಾಯಿತು. ಎಲ್. ಜಿ. ಹಾವನೂರ್ ಅವರ ಸಮಿತಿಯ ವರದಿಯ ಪ್ರಕಾರ ಕರ್ನಾಟಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ 1977ರಲ್ಲಿ ಸಾಮಾಜಿಕ ನ್ಯಾಯದ ಕಾನೂನನ್ನು ಬಲಿಷ್ಠವಾಗಿ ಅನುಷ್ಠಾನಗೊಳಿಸಿದರು. ತಬ್ಬಲಿಗಳ, ಅಲೆಮಾರಿಗಳ, ರೈತರ ಧ್ವನಿಯಾದರು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಮಾಜದ ಏಳ್ಗೆಗಾಗಿ ಬದುಕಿದ ಅರಸು ಅವರ ನಾಯಕತ್ವ, ಗ್ರಾಮೋದ್ಧಾರದ ದೃಷ್ಟಿಕೋನ, ಸಮಾನತೆ, ಶಿಕ್ಷಣ, ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಅಭಿವೃದ್ಧಿಯ ವಿಭಿನ್ನ ವಿಚಾರಧಾರೆಗಳು ವಿಕಾಸ ಪಥದ ಹೆಜ್ಜೆಯಾಗಿ ದೇಶಕ್ಕೆ ಮಾದರಿಯಾಗಿವೆ ಎಂದರು.
ವಿವಿಯ ಡಿ. ದೇವರಾಜ ಅರಸು ಅಧ್ಯಯನ ಪೀಠದ ಸಂಯೋಜಕ ಡಾ.ಗುಂಡೇಗೌಡ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಕೋಶದ ನಿರ್ದೇಶಕ ಪ್ರೊ.ಪರಶುರಾಮ ಕೆ.ಜಿ. ವಂದಿಸಿದರು. ಕುಲಸಚಿವೆ ನಾಹಿದಾ ಜûಮ್‌ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಹಾಜರಿದ್ದರು.