Friday, January 30, 2026
Google search engine
Homeಮುಖಪುಟಮತ್ತೊಮ್ಮೆ ಅಶೋಕ್ ಅಜ್ಞಾನ ಪ್ರದರ್ಶನ-ಸಿಎಂ ಸಿದ್ದರಾಮಯ್ಯ

ಮತ್ತೊಮ್ಮೆ ಅಶೋಕ್ ಅಜ್ಞಾನ ಪ್ರದರ್ಶನ-ಸಿಎಂ ಸಿದ್ದರಾಮಯ್ಯ

“ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲವೇ? ಈಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ನೀಡುತ್ತಿಲ್ಲ?’’ ಎಂದು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮತ್ತೊಮ್ಮೆ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಆರ್.ಅಶೋಕ್ ಅವರೇ, ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ವಾಸ್ತವಾಂಶವನ್ನು ಪರಿಶೀಲಿಸಿಕೊಂಡು ಮಾತನಾಡಿ ಎಂದು ತಾಕೀತು ಮಾಡಿದ್ದಾರೆ.

ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು 2011ರ ಜನವರಿ 21ರಂದು. ಅವರ ವಿರುದ್ಧ ಅರ್ಜಿದಾರರು ನೀಡಿದ್ದ 1600 ಪುಟಗಳ ಪ್ರಬಲ ದಾಖಲೆಗಳ ಸಾಕ್ಷ ಕೂಡಾ ಇತ್ತು. ಹಾಗಿದ್ದರೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಶೋಕ್ ಅವರೇ, ಆ ಕಾಲದಲ್ಲಿ ನೀವೇ ಅಲ್ಲವೇ ಯಡಿಯೂರಪ್ಪನವರು ರಾಜೀನಾಮೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದವರು. ಈಗ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ? ಎಂದು ಕೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು 2011ರ ಆಗಸ್ಟ್ ನಾಲ್ಕರಂದು. ಅದು ನ್ಯಾ.ಸಂತೋಷ್ ಹೆಗ್ಡೆ ಅವರ ನೇತೃತ್ವದ ಲೋಕಾಯುಕ್ತವು ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಸಲ್ಲಿಸಿದ ನಂತರ. ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 16,500 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಹೇಳಿತ್ತು ಎಂದು ನೆನಪಿಸಿದ್ದಾರೆ.

ಅಶೋಕ್ ಅವರೇ, ಹಳೆಯದ್ದನ್ನೆಲ್ಲವನ್ನೂ ನೆನಪಿಸಿಕೊಳ್ಳಿ, ಆಗ ನೀವೆಲ್ಲರೂ ಸೇರಿ ಯಡಿಯೂರಪ್ಪ ವಿರುದ್ಧವೇ ಏನೆಲ್ಲ ಕುತಂತ್ರ ಮಾಡಿದ್ದೀರಿ ಎನ್ನುವುದೂ ನೆನಪಾಗಬಹುದು ಎಂದು ಟೀಕಿಸಿದ್ದಾರೆ.

ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸಿದ್ದ ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದ ಲೋಕಾಯುಕ್ತವೇ ಆರೋಪಗಳೆಲ್ಲವನ್ನು ಸಾಬೀತುಪಡಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಮೂಲಕ ರಾಜ್ಯಪಾಲರ ಪ್ರಾಸಿಕ್ಯೂಷನ್ ನಿರ್ಧಾರ ನ್ಯಾಯಯುತವಾಗಿತ್ತು ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೇ ದೃಡೀಕರಿಸಿದ್ದರಲ್ಲವೇ? ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಒಂದಲ್ಲ ಎರಡಲ್ಲ ಹದಿನೈದು ಡಿನೋಟಿಫಿಕೇಷನ್ ಹಗರಣಗಳ ತನಿಖೆಗೆ ಅನುಮತಿ ನೀಡಿದ್ದರು. ಹೆಚ್ಚಿನ ಮಾಹಿತಿಗೆ ನ್ಯಾ.ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ತೆಗೆದು ಓದಿಕೊಳ್ಳಿ ಎಂದು ಹೇಳಿದ್ದಾರೆ.

ಇಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಪರವಾಗಿ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರಿಗೆ 2011ರಲ್ಲಿ ಆಗಿನ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರ ಬಗ್ಗೆ ಅವಹೇಳನ ಮಾಡಿದ್ದೆಲ್ಲ ಮರೆತುಹೋದಂತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ನಡೆಸಿರುವ ಪ್ರತಿಭಟನೆಯನ್ನು ಪ್ರಶ್ನಿಸುತ್ತಿರುವ ಕರ್ನಾಟಕದ ಬಿಜೆಪಿ ನಾಯಕರಿಗೆ 2011ರಲ್ಲಿ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೂ ಕೂಡಾ ಮರೆತುಹೋಗಿದೆ ಎಂದು ಲೇವಡಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular