Thursday, November 21, 2024
Google search engine
Homeಮುಖಪುಟಮುಡಾ ಪ್ರಕರಣ-ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದ ದಲಿತ ಮುಖಂಡ ಭಾಸ್ಕರ್ ಪ್ರಸಾದ್

ಮುಡಾ ಪ್ರಕರಣ-ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದ ದಲಿತ ಮುಖಂಡ ಭಾಸ್ಕರ್ ಪ್ರಸಾದ್

ದಲಿತರಾಮಯ್ಯ ಎಂದು ಹೇಳಿಕೊಂಡು ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಸಿದ್ದರಾಮಯ್ಯ ಅವರು ಬೇರೆ ಯೋಜನೆಗಳಿಗೆ ಉಪಯೋಗಿಸಿದ್ದಾರೆ. ಅವರ ವಿರುದ್ಧ ಮುಡಾ ಹಗರಣದಲ್ಲಿ ರಾಜ್ಯಪಾಲರ ನಡೆ ಸರಿಯಾಗಿದ್ದು, ಕೂಡಲೇ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಭಾಸ್ಕರ್  ಪ್ರಸಾದ್ ಒತ್ತಾಯಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಾದಲ್ಲಿ ಸಿದ್ದರಾಮಯ್ಯ ಕುಟುಂಬದ ವೈಯಕ್ತಿಕ ಹಗರಣ, ಆದರೆ ಅದಕ್ಕಿಂತಲೂ ಹೆಚ್ಚಿನ ಹಗರಣಗಳು ದಲಿತರ ಹೆಸರಿನಲ್ಲಿ ನಡೆದಿವೆ. ಹಾಗಾಗಿ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಆ. 28 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಠಾವೋ ದಲಿತ ಬಚಾವೋ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪರಿಶಿಷ್ಟರ ರಕ್ಷಣೆ, ನಮ್ಮ ಹಕ್ಕು ಕೇಳಲು ಪ್ರತಿಭಟನೆ ನಡೆಯಲಿದೆ. ನಮ್ಮ ಪಾಲಿನ ಹಣದಿಂದ ಬೇರೆಯವರ ಹೊಟ್ಟೆ ತುಂಬುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೀಸಲಿಟ್ಟರೂ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.

ಅಹಿಂದ ಸಂಘಟನೆಗಳ ಒಕ್ಕೂಟದ ಮತ್ತೋರ್ವ ಸಂಚಾಲಕ ಪ್ರೊ. ಹರಿರಾಮ್ ಮಾತನಾಡಿ, ಸಿದ್ದರಾಮಯ್ಯ ದಲಿತರ ಪಾಲಿಗೆ ಅನ್ನರಾಮಯ್ಯ ಅಲ್ಲ, ಕನ್ನರಾಮಯ್ಯ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿಯುತ್ತಿದ್ದಾರೆ. ಸೂಕ್ತವಾದ ನಾಯಕತ್ವ ಬೇಕು ಎಂದು ಒಂದು ವರ್ಷದ ಕಾಲ ದಲಿತ ಹಿಂದುಳಿದ ಸಂಘಟನೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿದೆ. ದಲಿತ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದರು, ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ಪಿಕ್ ಪಾಕೆಟ್ ಮಾಡಿದರು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ವಿರುದ್ಧ ಬಿಜೆಪಿ ಪಕ್ಷ ತಂದಿದ್ದ ಹಲವು ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಅತ್ತ ತಿರುಗಿಯೂ ನೋಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದ ಶಂಕರ್ ಲಿಂಗಯ್ಯ, ಶ್ರೀನಿವಾಸಮೂರ್ತಿ, ಸಿದ್ದಾಪುರ ಮಂಜುನಾಥ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular