ವಯಸ್ಸು ಮೀರಿದರೂ ವಿವಾಹವಾಗದೇ ಹಾಗೆಯೇ ಇರುವ ಅವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಮದುವೆ ಮಾಡಿ ವಂಚಿಸುತ್ತಿದ್ದ ಜಾಲವನ್ನು ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸರು ಬೇಧಿಸಿದ್ದಾರೆ. ಈ ಜಾಲವು ಮೂರು ವರ್ಷಗಳಲ್ಲಿ ನಾಲ್ಕು ಮದುವೆ ಮಾಡಿಸಿರುವುದು ತನಿಖೆಯಿಂದ ವೇಳೆ ಪತ್ತೆಯಾಗಿದೆ.
ಮದುವೆಯಾಗದ ಅವಿವಾಹಿತರು ವಯಸ್ಸು ಮೀರಿ ಹೋಗುತ್ತಿದೆ ಎಂಬ ಕಾರಣಕ್ಕೆ ದಿಢೀರ್ ಮದುವೆಯಾಗುವ ತೀರ್ಮಾನ ಮಾಡಿದ ಗುಬ್ಬಿ ತಾಲ್ಲೂಕಿನ ಕುಟುಂಬವೊಂದು ವಂಚಕ ತಂಡದ ಜಾಲಕ್ಕೆ ಬಿದ್ದು ಇತ್ತ ಮದುವೆಯಾದ ಪತ್ನಿಯೂ ಇಲ್ಲದೆ ಆಕೆಗೆ ಹಾಕಿದ ಒಡೆವೆಗಳೂ ಇಲ್ಲದೆ ಮೋಸ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿದೆ.
ಮದುವೆ ಹೆಸರಿನಲ್ಲಿ ದೋಖಾ ಮಾಡುತ್ತಿದ್ದ ತಂಡವನ್ನು ಗುಬ್ಬಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಈ ತಂಡ ತುಮಕೂರು ಸೇರಿದಂತೆ ರಾಜ್ಯದ ಹಲವು ಕಡೆ ಮದುವೆ ಮಾಡುವ ನಾಟಕವಾಡಿ ಹಲವರನ್ನು ಯಾಮಾರಿಸಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷ ಎಂಬುವರು ತಮ್ಮ ಮಗನಿಗೆ ಮದುವೆ ಮಾಡಲು ಹರಸಾಹಸ ನಡೆಸಿದ್ದರು. ಪಾಲಾಕ್ಷ ಅವರು ತಮ್ಮ ಪುತ್ರ ದಯಾನಂದಮೂರ್ತಿಗೆ 34 ವರ್ಷ ದಾಟಿದರೂ ಹೆಣ್ಣು ಸಿಗದೆ ನೊಂದಿದ್ದರು. ಹಲವು ಮಂದಿ ಹೆಣ್ಣುಗಳನ್ನು ಹುಡುಕಿದ್ರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ.
ಪಾಲಕ್ಷ ಅವರು ಮಗನಿಗೆ ಮದುವೆ ಮಾಡಲು ಹತ್ತಾರು ಮದುವೆ ಬ್ರೋಕರ್ ಗಳ ಮೂಲಕ ಹೆಣ್ಣು ಹುಡುಕಿಸಿದ್ದ ಸಾಕಾಗಿದ್ದರು. ಹೀಗಿದ್ದಾಗ ಕುಷ್ಟಗಿ ಮೂಲದ ಬಸವರಾಜು ಮೂಲಕ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಲಕ್ಷ್ಮಿ ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ಪಾಲಾಕ್ಷ ಅವರು ಮಗನಿಗೆ ಹೆಣ್ಣು ಹುಡುಕಿಕೊಡುವಂತೆ ಲಕ್ಷ್ಮಿ ಬಳಿ ಹೇಳಿದ್ದರು. ಪಾಲಾಕ್ಷ ಅವರ ಮನೆಯ ಹಿನ್ನೆಲೆಯನ್ನು ತಿಳಿದುಕೊಂಡ ಬ್ರೋಕರ್ ಲಕ್ಷ್ಮಿ ಮೋಸ ಮಾಡುವ ಸ್ಕೆಚ್ ಹಾಕಿ, ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ ನೀವೆ ಮದುವೆ ಮಾಡಿಕೊಳ್ಳಬೇಕೆಂದು ಪಾಲಾಕ್ಷ ಅವರಿಗೆ ಸುಳ್ಳು ಹೇಳಿದ್ದಾಳೆ. ಜೊತೆಗೆ ಕೋಮಲ ಎಂಬ ಹೆಸರಿನ ಯುವತಿಯ ಪೋಟೋ ತೋರಿಸಿ ಹುಡುಗಿ ಚನ್ನಾಗಿದ್ದಾಳೆ ಮದುವೆ ಮಾಡಿಕೊಳ್ಳಿ ಎಂದು ಪಾಲಾಕ್ಷ ಅವರಿಗೆ ಲಕ್ಷ್ಮಿ ಹೇಳಿದ್ದಳು.
ಇದನ್ನು ಪಾಲಾಕ್ಷ ನಂಬಿದರು. ಹೀಗಾಗಿ ಅತ್ತಿಕಟ್ಟೆ ಗ್ರಾಮಕ್ಕೆ ಮದುವೆ ಶಾಸ್ತ್ರ ನೋಡಲು ಯುವತಿ ಜೊತೆಗೆ ಚಿಕ್ಕಮ್ಮ-ಚಿಕ್ಕಪ್ಪ ಕಳೆದ ವರ್ಷ ನವೆಂಬರ್ 11ರಂದು ಬಂದಿದ್ದರು. ಆ ದಿನವೇ ಎರಡು ಕುಟುಂಬಗಳು ಮದುವೆ ಮಾತುಕತೆ ನಡೆಸಿ, ಮಗನಿಗೆ ಹೆಣ್ಣು ಸಿಗದೆ ಹೈರಾಣಾಗಿದ್ದ ಪಾಲಾಕ್ಷ ಕುಟುಂಬ ದಿಢೀರ್ ಮದುವೆ ಮಾಡಲು ಒಪ್ಪಿಕೊಂಡು ತಮ್ಮ ಗ್ರಾಮದಲ್ಲೇ ಮದುವೆ ಮಾಡಿಸಿದ್ದಾರೆ.
ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೂ ಮುಂದು ಯೋಚಿಸದೆ ಮದುವೆ ಮಾಡಿದ ಪಾಲಾಕ್ಷ್ಯ ಅವರು, ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿ ಮುಗಿಸಿದ್ದರು. ಮದುವೆ ಸಂದರ್ಭದಲ್ಲಿ ಹೆಣ್ಣಿಗೆ ಚಿನ್ನದ ಸರ, ತಾಳಿ, ಕವಿಗೆ ಓಲೆ ನೀಡಿದ್ದರು ಪಾಲಾಕ್ಷ. ಹೆಣ್ಣು ತೋರಿಸಿದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ರೂಪಾಯಿ ನೀಡಿದ್ದರು.
ಮದುವೆ ಮುಗಿದ 2 ದಿನದ ನಂತರ ಸಂಪ್ರದಾಯದ ಕಾರಣ ನೀಡಿ ವಡವೆಗಳನ್ನು ಹಾಕಿಕೊಂಡಿದ್ದ ಮದುಮಗಳನ್ನು ಮಾತ್ರ ವಾಪಸ್ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಮದುಮಗಳು ವಾಪಸ್ ಬಾರದೆ ಇರುವುದನ್ನು ನೋಡಿದ ಗಂಡಿನ ತಂದೆ ಪಾಲಾಕ್ಷ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ನಡೆದಿರುವ ಮದುವೆ ನಕಲಿ ಎಂಬ ಸತ್ಯ ಬಯಲಾಗಿದೆ.
ಗುಬ್ಬಿಗೆ ವಾಪಸ್ ಬಂದ ಪಾಲಾಕ್ಷ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಗುಬ್ಬಿ ಪೊಲೀಸರು ಒಂದು ವರ್ಷದಿಂದ ಮಹಾರಾಷ್ಟ್ರ, ಹುಬ್ಬಳ್ಳಿಯಲ್ಲಿ ತಲೆ ಮರೆಸಿಕೊಂಡು ತಿರುಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ತಂಡ ಇದಕ್ಕಾಗಿ ನಕಲಿ ಅಡ್ರೆಸ್ ನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ ಮನೆಯವರನ್ನ ನಂಬಿಸುತ್ತಿದ್ದರು ಎಂದು ಪೊಲೀಸರ ವಿಚಾರಣೆಯ ವೇಳೆ ಪತ್ತೆಯಾಗಿದೆ.
ಮಧುಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವುದು ಮತ್ತು ಚಿಕ್ಕಪ್ಪ-ಚಿಕ್ಕಮ್ಮ ಹೆಸರಿನಲ್ಲಿ ಬಂದಿದ್ದವರು ನಕಲಿ ಪೋಷಕರು ಎಂಬುದು ತಿಳಿದುಬಂದಿದೆ.