Thursday, November 21, 2024
Google search engine
Homeಜಿಲ್ಲೆಟೆಂಡರ್ ರದ್ದುಪಡಿಸಲು ಒಪ್ಪಿಗೆ-ಪ್ರತಿಭಟನೆ ವಾಪಸ್

ಟೆಂಡರ್ ರದ್ದುಪಡಿಸಲು ಒಪ್ಪಿಗೆ-ಪ್ರತಿಭಟನೆ ವಾಪಸ್

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ಕೃಷ್ಣಪ್ಪ ಎಂಬುವವರ ಭೂಮಿಯನ್ನು ಕರ್ನಾಟಕ ಬ್ಯಾಂಕನವರು ಸರ್ಫೇಸಿ ಕಾಯ್ದೆ ಅನ್ವಯ ಈ ಟೆಂಡರ್ ಮೂಲಕ ಹರಾಜು ಹಾಕಿದ್ದ ಭೂಮಿಯ ಟೆಂಡರ್ ರದ್ದು ಪಡಿಸಿ, ರೈತರಿಗೆ ಜಮೀನು ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಕರೆದಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರದ ಕರ್ನಾಟಕ ಬ್ಯಾಂಕಿನ ವಲಯ ಕಚೇರಿಯಲ್ಲಿ ಶುಕ್ರವಾರ ರಾತ್ರಿ ನಡೆದ ಬ್ಯಾಂಕಿನ ಜಿ.ಎಂ.ಕೆ.ಸುಬ್ರಾಮ್ ಮತ್ತು ಎಜಿಎಂ ಮಲ್ಲನಗೌಡ ಅವರುಗಳು, ಲೀಡ್ ಬ್ಯಾಂಕ್ ಸಮ್ಮುಖದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ, ರೈತರ ಭೂಮಿಯನ್ನ ಹರಾಜು ಹಾಕಿರುವುದು ತಪ್ಪಾಗಿದೆ. ಹಾಗಾಗಿ ಮುಂದಿನ ಎರಡು ತಿಂಗಳ ಒಳಗೆ ರೈತರ ಜಮೀನು ಹರಾಜನ್ನು ರದ್ದುಪಡಿಸಿ, ರೈತರಿಗೆ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದು ರೈತ ಸಂಘದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.

ಕರ್ನಾಟಕ ಬ್ಯಾಂಕಿನ ಜಿ.ಎಂ ಮತ್ತು ಎಜಿಎಂ ಅವರು ರೈತರೊಂದಿಗೆ ನಡೆದ ಸಭೆಯಲ್ಲಿ, ರೈತ ಮುಖಂಡರು ಬ್ಯಾಂಕಿನ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು, ಬ್ಯಾಂಕ್ ಅಧಿಕಾರಿಗಳು ಒಟಿಎಸ್‌ಗೆ ಅವಕಾಶ ನೀಡದೆ, ಸುಮಾರು 3.50 ಕೋಟಿ ಬೆಲೆ ಬಾಳುವ ಭೂಮಿಯನ್ನು ಕೇವಲ 35.80 ಲಕ್ಷ ರೂಗಳಿಗೆ ಈ ಟೆಂಡರ್ ಮೂಲಕ ಹರಾಜು ನಡೆಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಒಟಿಎಸ್‌ಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯವನ್ನು ಮಾಡಿದ್ದು, ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರೈತ ಕೃಷ್ಣಪ್ಪ ಅವರಿಗೆ ಭೂಮಿ ಹಿಂದಿರುಗಿಸಿದ ನಂತರ, ರೈತರು ತೆಗೆದುಕೊಂಡಿರುವ ಸಾಲದ ಅಸಲನ್ನು ಕಟ್ಟಿಸಿಕೊಂಡು,ಬಡ್ಡಿ ಮನ್ನಾ ಮಾಡುವಂತೆ ಸಹ ಬ್ಯಾಂಕಿನ ಅಧಿಕಾರಿಗಳ ಮುಂದೆ ಬೇಡಿಕೆ ಇಡಲಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರ್ಫೇಸಿ ಕಾಯ್ದೆ ರೈತರಿಗೆ ಮಾರಕವಾಗಿದ್ದು, ಈ ಕಾಯ್ದೆಯಿಂದ ರೈತರ ಕೃಷಿ ಭೂಮಿಯನ್ನು ಹೊರಗಿಡುವಂತೆ ಈಗಾಗಲೇ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರೂ ಸಹ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.ಈಗಲೂ ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ರೈತರಿಗೆ ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಈ ಕಾಯ್ದೆಯಿಂದ ಹೊರಗಿಡಬೇಕು. ಇಲ್ಲದಿದ್ದಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸುವುದರ ಜೊತೆಗೆ, ರೈತರು ಮತ್ತು ಬ್ಯಾಂಕಿನ ಸಿಬ್ಬಂದಿ ನಡುವೆ ನಿರಂತರ ಸಂಘರ್ಷಕ್ಕೆ ಕಾರಣವಾಗಲಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ತುರುವೇಕೆರೆ ಶ್ರೀನಿವಾಸಗೌಡ, ಕೆ.ಎನ್.ವೆಂಕಟೇಗೌಡ, ಅಸ್ಲಾಂ ಪಾಷ, ತಿಮ್ಮೇಗೌಡ, ರಹಮತ್‌ವುಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಶೇಖರ್, ಪುರುಷೋತ್ತಮ್, ಲೋಕೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular