ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತು ಪ್ರಶ್ನಿಸಿದ್ದಕ್ಕೆ ದಲಿತ ಮಹಿಳೆ ಮತ್ತು ಆಕೆಯ ತಂದೆಯ ಮೇಲೆ ಸವರ್ಣೀಯ ಕುಟುಂಬವೊಂದು ಹಲ್ಲೆ ನಡೆಸಿ, ಗಾಯಗೊಳಿಸಿರುವ ಘಟನೆ ತುಮಕೂರು ತಾಲೂಕು ಚಿನಿವಾರನಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು ತಾಲೂಕಿನ ಚಿನಿವಾರನಹಳ್ಳಿಯ ರಾಮಕ್ಕಗೆ ಆಕೆಯ ತಂದೆ ಹರಿಸಿನ, ಕುಂಕುಮಕ್ಕೆಂದು ಒಂದು ನಿವೇಶನ ನೀಡಿದ್ದರು. ಸದರಿ ನಿವೇಶನದಲ್ಲಿ ರಾಮಕ್ಕ ಮತ್ತು ಆಕೆಯ ಅಂಗವಿಕಲ ಪತಿ ಸ್ವಲ್ಪ ಭಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದರು. ಉಳಿದ ಭಾಗದಲ್ಲಿ ತಂಗಿನ ಸಸಿಗಳನ್ನು ನೆಟ್ಟಿದ್ದರು. ರಾಮಕ್ಕನ ಮನೆಯ ಪಕ್ಕದಲ್ಲಿಯೇ ಇದ್ದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಪುಟ್ಟಹನುಮಯ್ಯ ಅವರ ಕುಟುಂಬದ ಜಮೀನಿದ್ದು, ಇಬ್ಬರ ನಡುವೆ ಜಮೀನಿನ ವಿವಾದವಿತ್ತು. ಕಳೆದ ಕೆಲ ದಿನಗಳ ಹಿಂದೆ ಸರ್ವೆ ಮಾಡುವ ಸಂದರ್ಭದಲ್ಲಿ ಪರಸ್ವರ ಒತ್ತುವರಿಯಾಗಿರುವುದು ಕಂಡು ಬಂದಿತ್ತು. ಆದರೆ ಯಾರು ಸಹ ಒತ್ತುವರಿ ತೆರವು ಮಾಡಿರಲಿಲ್ಲ.
ಜುಲೈ 31ರಂದು ಮಧ್ಯಾಹ್ನ 3.30ರ ಸುಮಾರಿಗೆ ರಾಮಕ್ಕ ಅವರ ಮಕ್ಕಳು ಹೊರಗಡೆ ಹೋಗಿರುವ ಸಂದರ್ಭದಲ್ಲಿ ಏಕಾಎಕಿ ಜಗಳಕ್ಕೆ ಬಂದ ಪುಟ್ಟಹನುಮಯ್ಯ, ಆತನ ಪತ್ನಿ ಮಂಜಮ್ಮ, ಮಕ್ಕಳಾದ ವಿನೋದ ಮತ್ತು ಜೋತಿ, ನಮ್ಮ ಜಮೀನನ್ನು ನೀನು ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡು ಎಂದು ಧಮಕಿ ಹಾಕಿದರು ಎನ್ನಲಾಗಿದೆ.
ಇದಕ್ಕೆ ರಾಮಕ್ಕ ನಮ್ಮ ನಿವೇಶನವನ್ನು ಸಹ ಒಂದು ಭಾಗದಲ್ಲಿ ನಿಮ್ಮಿಂದ ಒತ್ತುವರಿಯಾಗಿದೆ. ಮೊದಲು ನೀವು ತೆರವು ಮಾಡಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಸವರ್ಣೀಯ ಕುಟುಂಬದ ನಾಲ್ವರು ಜಾತಿ ನಿಂದನೆ ಮಾಡಿ, ಇಟ್ಟಿಗೆ ದೊಣ್ಣೆಯಿಂದ ರಾಮಕ್ಕ ಹಾಗೂ ಆಕೆಯ ಮಗಳು ರಮ್ಯಳ ಮೇಲೆ ದಾಳಿ ನಡೆಸಿ, ರಾಮಕ್ಕನ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವೇಳೆ ಅಲ್ಲಿಗೆ ಆಗಮಿಸಿದ ರಾಮಕ್ಕನ ವಯೋವೃದ್ದ ತಂದೆ ಹಲ್ಲೆ ಮಾಡುತ್ತಿದ್ದವರಿಗೆ ಅಡ್ಡ ನಿಂತು ಮಗಳನ್ನು ಬಿಡಿಸಿಕೊಂಡಿದ್ದಾರೆ. ಹಲ್ಲೆಗೊಳಗಾಗಿ ಗಾಯಗೊಂಡಿದ್ದ ರಾಮಕ್ಕನನ್ನ ಮಗಳು ಹಾಗೂ ತಮ್ಮ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆಗೆ ಒಳಗಾಗಿರುವ ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ, ತಪಿತಸ್ಥರನ್ನು ಬಂಧಿಸಬೇಕೆಂದು ತುಮಕೂರು ಗ್ರಾಮಾಂತರ ಛಲವಾದಿ ಗ್ರಾಮೀಣಾಭಿವೃದ್ದಿ ಸಂಘ ಒತ್ತಾಯಿಸಿದೆ.