ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಬಂದ ರೌಡಿ ಶೀಟರ್ ಒಬ್ಬನ ಕಾಲಿಗೆ ಗುಂಡೇಟು ಹೊಡೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜುಲೈ 26ರಂದು ಸಂಜೆ 7 ಗಂಟೆ ಸಮಯದಲ್ಲಿ ಪೊಲೀಸರು ರೌಡಿ ಶೀಟರ್ ವೊಬ್ಬನನ್ನು ಸ್ಥಳ ಮಹಜರುಗೆ ತುಮಕೂರು ಹೊರವಲಯದ ದಿಬ್ಬೂರು ಬಳಿ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಮನು ತಪ್ಪಿಸಿಕೊಂಡು ಹೋಗಲು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ.
ಕೂಡಲೇ ಸಿಪಿಐ ದಿನೇಶ್ ಕುಮಾರ್ ರೌಡಿಶೀಟರ್ ಮನುಗೆ ವೆಪನ್ ನೀಡುವಂತೆ ಮನವಿ ಮಾಡಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಮನು ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ಆತನ ಕಾಲಿಗೆ ಗುಂಡೇಟು ಹೊಡೆದಿದ್ದಾರೆ.
ರೌಢಿ ಶೀಟರ್ ಮನು ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈಗ ಆರೋಪಿ ಮೇಲೆ ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ಕೇಸ್ ಹಾಕಿ ತನಿಖೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತುಮಕೂರು ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮನು ಆರೋಪಿಯಾಗಿದ್ದ.ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆರೋಪಿಯನ್ನ ಬಂಧಿಸಲಾಗಿತ್ತು. ಆರೋಪಿ ಮನು ತುಮಕೂರಿನಲ್ಲಿ ವಾಸವಿದ್ದು ಈತ ಮೂಲ ಪುಟ್ಟಪರ್ತಿ ಎಂದು ಪೊಲೀಸರು ತಿಳಿಸಿದ್ದಾರೆ.