Friday, November 22, 2024
Google search engine
Homeಜಿಲ್ಲೆಬಿಎಸ್ಎನ್ಎಲ್ ನಿಂದ 4ಜಿ ಸೇವೆ ಆರಂಭ

ಬಿಎಸ್ಎನ್ಎಲ್ ನಿಂದ 4ಜಿ ಸೇವೆ ಆರಂಭ

ಖಾಸಗಿ ವಲಯದ ಪೈಪೋಟಿಯ ನಡುವೆ ಬಿಎಸ್ಎನ್ಎಲ್ ಬಿದ್ದೇ ಹೋಯಿತು ಎನ್ನುವ ಸಂದರ್ಭದಲ್ಲಿ ಈಗ ಮತ್ತೆ ಪುಟಿದೆದ್ದು ನಿಂತಿದೆ. ಇದೀಗ ಬಿಎಸ್ಎನ್ಎಲ್ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 4ಜಿ ಸೇವೆ ಪ್ರಾರಂಭಿಸಿದೆ. ಪರಿಣಾಮವಾಗಿ ಬಿಎಸ್ಎನ್ಎಲ್ ನಿಂದ ಬೇರೆ ಕಡೆಗೆ ಹೋಗಿದ್ದ ಗ್ರಾಹಕರು ಮರಳಿ ಬಿಎಸ್ಎನ್ಎಲ್ ನತ್ತ ವಾಪಸ್ ಬರುತ್ತಿದ್ದಾರೆ ಎಂದು ಸೀನಿಯರ್ ಜನರಲ್ ಮ್ಯಾನೇಜರ್ ದಿಗಂಬರ್ ಕುಮಾರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 2ಜಿ ಮತ್ತು 3ಜಿ ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ಇದೀಗ 4ಜಿ ಸೇವೆ ಒದಗಿಸಲಾಗುತ್ತಿದೆ. ತುಮಕೂರು ಮತ್ತು ಹಾಸನ ವ್ಯಾಪಾರ ವಹಿವಾಟಿನ ವಲಯದಲ್ಲಿ ಜುಲೈನಿಂದಲೇ ಈ ಸೇವೆ ಆರಂಭಗೊಂಡಿದ್ದು, ಪ್ರಸ್ತುತ ತುಮಕೂರಿನಲ್ಲಿ 50 ಮತ್ತು ಹಾಸನದಲ್ಲಿ 20 ಸೈಟ್ ಗಳು 4ಜಿ ಸೇವೆಯಲ್ಲಿ ಕಾರ್ಯಾರಂಭಗೊಂಡಿವೆ. ಜುಲೈ ಅಂತ್ಯದ ವೇಳೆಗೆ 100 ಮತ್ತು 50 ಕ್ರಮವಾಗಿ ತುಮಕೂರು ಮತ್ತು ಹಾಸನದಲ್ಲಿ ಇರುತ್ತವೆ. ಅಕ್ಟೋಬರ್ ವೇಳೆಗೆ ತುಮಕೂರಿನ 286 ಮತ್ತು ಹಾಸನದಲ್ಲಿ 194 ಅಸ್ತಿತ್ವದಲ್ಲಿರುವ ಮತ್ತು ಹೊಸ ಸೈಟ್ ಗಳು 4ಜಿಗೆ ಹೊಂದಿಕೆಯಾಗಲಿವೆ ಎಂದು ವಿವರಿಸಿದರು.

ಈಗಾಗಲೇ ಬಿಎಸ್ಎನ್ಎಲ್ ಸಿಮ್ ಗಳನ್ನು ಹೊಂದಿ ಕಾರಣಾಂತರಗಳಿಂದ ಸ್ಥಗಿತಗೊಳಿಸಿರುವ ಗ್ರಾಹಕರು, ಉಪಯೋಗಿಸದೆ ಇರುವ ಗ್ರಾಹಕರು ಕೂಡಲೇ ಬಿಎಸ್ಎನ್ಎಲ್ ಸೇವೆ ಪಡೆಯಬಹುದಾಗಿದೆ. 4ಜಿ ಸಿಮ್ ಅನ್ನು ಗ್ರಾಹಕರಿಗೆ ಉಚಿತವಾಗಿ ವಿತರಿಸಲಾಗುವುದು. ಹೊಸ ಗ್ರಾಹಕರು ಹತ್ತಿರದ ಸಿಎಸ್ಸಿ ಅಥವಾ ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ಡಿಸೆಂಬರ್ 24ರ ವೇಳೆಗೆ ಎಲ್ಲ 4ಜಿ ಸೈಟ್ ಗಳನ್ನು ಎರಡೂ ಜಿಲ್ಲೆಗಳಲ್ಲಿ 5ಜಿ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಮಾಡಲಾಗುತ್ತದೆ. ಅದು ಸಾಫ್ಟ್ ವೇರ್ ಆಧಾರಿತವಾಗಿದೆ. ಇದೇ ಮೊದಲ ಬಾರಿಗೆ ಬಿಎಸ್ಎನ್ಎಲ್ 4ಜಿಗೆ ಮೇಕಿನ್ ಇಂಡಿಯಾ ಉಪಕರಣಗಳನ್ನು ಮಾತ್ರ ಬಳಸುತ್ತಿದೆ. ಇದಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಹಾಯ ಮಾಡುತ್ತಿದೆ ಎಂದು ಹೇಳಿದರು.

ಪ್ರಸ್ತುತ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರತಿ ತಿಂಗಳು 5 ಸಾವಿರ ಹೊಸ ಗ್ರಾಹಕರು ಬಿಎಸ್ಎನ್ಎಲ್ ಗೆ ಸೇರುತ್ತಿದ್ದಾರೆ. ಇತರೆ ಅಪರೇಟರ್ಗಳು ಸುಂಕವನ್ನು ಶೇ.25 ರಿಂದ 30ರಷ್ಟು ಹೆಚ್ಚಿಸಿದ್ದರೂ ಸಹ ಬಿಎಸ್ಎನ್ಎಲ್ ಮಾತ್ರ ಸುಂಕವನ್ನು ಹೆಚ್ಚಿಸಿಲ್ಲ. ಮುಂದೆಯೂ ಹೆಚ್ಚಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಎಸ್ಎನ್ಎಲ್ ಯೋಜನೆಯು ದಿನಕ್ಕೆ 1 ಜಿಬಿ ಡೇಟಾದೊಂದಿಗೆ 28 ದಿನಗಳವರೆಗೆ 108 ರೂ.ಗಳಿಂದ ಪ್ರಾರಂಭವಾಗಲಿದೆ. ಇತರೆ 28 ದಿನಗಳವರೆಗೆ 349 ರಿಂದ ಪ್ರಾರಂಭವಾಗುತ್ತದೆ ಎಂದು ವಿವಿಧ ಆಕರ್ಷಕ ಸುಂಕದ ಯೋಜನೆಗಳನ್ನು ವಿವರಿಸಿದರು. ಇದರ ಜೊತೆಗೆ ಮನೆಗಳಿಗೆ ವೈರ್ಲೆಸ್ ಫೈಬರ್ ಸೇವೆಗಳ ಬಗ್ಗೆಯೂ ಮಾಹಿತಿ ನೀಡುತ್ತಾ ಗ್ರಾಮೀಣ ಯೋಜನೆ ಮಾಸಿಕ 249 ರೂ., ನಗರ ಯೋಜನೆ 299 ರೂ.ಗಳು ಇರುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular