ಆಂಗ್ಲಭಾಷೆಯಲ್ಲಿ ಎಷ್ಟು ಹಿಡಿತ ಹೊಂದಿದ್ದರೂ ಸಹ ಕನ್ನಡದಲ್ಲಿ ಹಿಡಿತ ಹೊಂದಿರಬೇಕು, ಎಲ್ಲರೂ ಕನ್ನಡದ ಮೇಲೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು, ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದಿನ ಮೇಲೆ ನಿಗಾ ಇಡಬೇಕು, ಕನ್ನಡದಲ್ಲಿ ಬರೆಯುವುದು, ಓದುವುದು ಮಾಡಿದಾಗ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ, ಮಕ್ಕಳಿಗೆ ಅಂಕಗಳಿಗಿಂತ ಸಂಸ್ಕಾರ ಮುಖ್ಯ, ಉತ್ತಮ ಸಂಸ್ಕಾರವಂತರಾದಾಗ ತಂದೆ-ತಾಯಿಗಳಿಗೂ ಹೆಸರು ಬರುತ್ತದೆ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ನಗರ ಘಟಕ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಇತರೆ ಎಲ್ಲವನ್ನೂ ಕನ್ನಡದಲ್ಲಿ ಬರೆಯಬಹುದು, ಕನ್ನಡದ ಮೇಲೆ ಪ್ರೀತಿ ಗೌರವ ಹೊಂದಿರಬೇಕು, ಪೋಷಕರು ಮಕ್ಕಳಿಗೆ ನಾಡು-ನುಡಿಯ ಬಗ್ಗೆ ಸದಾ ತಿಳಿಸಿಕೊಡಬೇಕು, ಉತ್ತಮ ವ್ಯಕ್ತಿತ್ವ ಹೊಂದಿದಾಗ ಮನುಷ್ಯನಿಗೆ ಗೌರವ ಹೆಚ್ಚಾಗುತ್ತದೆ, ಪೋಷಕರು ಸಹ ಮೊಬೈಲ್ ಗೀಳಿನಿಂದ ಹೊರಬರಬೇಕು, ಇಂದು ಎಲ್ಲರೂ ಮೊಬೈಲ್ಗೆ ದಾಸರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರ ಘಟಕದ ಅಧ್ಯಕ್ಷೆ ಗೀತಾ ನಾಗೇಶ್ ಮಾತನಾಡಿ, ಕನ್ನಡದ ಅಸ್ತಿತ್ವ ಇರುವುದೇ ಮಕ್ಕಳಲ್ಲಿ ಎಲ್ಲರೂ ಕನ್ನಡವನ್ನು ಪ್ರೀತಿಸಬೇಕು, ಹೆಚ್ಚು ಮಾತನಾಡಬೇಕು. ಇಂಗ್ಲೀಷ್ ಬಂದರೂ ನಮ್ಮ ರಾಜ್ಯದಲ್ಲಿ ಎಲ್ಲರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು, ಕನ್ನಡ ಎಲ್ಲರ ಉಸಿರಾಗಲಿ, ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳು ಕನ್ನಡದಲ್ಲಿಯೇ ಇರಬೇಕು. ಇದು ನಮ್ಮ ಹಕ್ಕೋತ್ತಾಯ ಎಂದರು.
ಕಾರ್ಯಕ್ರಮದಲ್ಲಿ ಶಶಿ ಹುಲಿಕುಂಟೆಮಠ್. ಪ್ರೊ.ಕೆ.ಎಸ್.ಸಿದ್ಧಲಿಂಗಪ್ಪ, ಸಾ.ಚಿ.ರಾಜಕುಮಾರ್, ಚಿಕ್ಕಬೆಳ್ಳಾವಿ ಶಿವಕುಮಾರ್, ನಂದಿನಿ, ಜ್ಯೋತಿ ಹಾಜರಿದ್ದರು.


