ಪರಿಸರ ಸಂರಕ್ಷಣೆಗೆ ನಾವು ಮುಂದಾಗದಿದ್ದರೆ, ನಮ್ಮ ಮಕ್ಕಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.ಹಾಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗದ ಅಗತ್ಯವಿದೆ ಎಂದು ಪದ್ಮಶ್ರೀ, ನಾಡೋಜ ಸಾಲುಮರದ ತಿಮ್ಮಕ್ಕ ತಿಳಿಸಿದ್ದಾರೆ.
ತುಮಕೂರು ತಾಲೂಕು ವೀರಭದ್ರೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನಾಗಲಿ, ನನ್ನ ಪತಿಯಾಗಲಿ, ಪ್ರಶಸ್ತಿಯ ಆಸೆಯಿಂದ ಗಿಡಮರಗಳನ್ನು ನೆಟ್ಟದಲ್ಲ. ನಮಗೆ ಮತ್ತು ದಾರಿ ಹೋಕರ ನೆರಳಿಗೋಸ್ಕರ ರಸ್ತೆಯ ಇಕ್ಕೆಲಗಳಲ್ಲಿ ಆಲ, ಗೋಣಿ ಮರಗಳನ್ನು ನೆಟ್ಟು, ದೂರದಿಂದ ನೀರು ತಂದು ಹಾಕಿ ಪೋಷಿಸಿದವು. ಇಂದಿಗೂ ಅವುಗಳನ್ನು ನೋಡಿದರೆ ಏನೋ ಸಂತೋಷ ಆಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ. ಹಾಗಾಗಿ ಪರಿಸರದೊಂದಿಗಿನ ಸ್ನೇಹ ಎಂತಹವರನ್ನು ಪುಳಕಿತಗೊಳಿಸುತ್ತದೆ ಎಂದು ಹೇಳಿದರು.
ನಮ್ಮ ಕಾಲದಲ್ಲಿ ಓದು, ಬರಹಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಅಲ್ಲದೆ ಹೆಣ್ಣು ಮಕ್ಕಳಿಗೆ ಓದು, ಬರಹ ಕಷ್ಟ ಸಾಧ್ಯವಾಗಿತ್ತು. ಇಂದು ಸರ್ಕಾರವೇ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿ ಪ್ರೋತ್ಸಾಹ ನೀಡುತ್ತಿದೆ. ಇದರ ಲಾಭವನ್ನು ಪಡೆದುಕೊಂಡು ಉತ್ತಮ ಅಂಕಗಳೊಂದಿಗೆ ಒಳ್ಳೆಯ ಪ್ರಜೆಗಳಾಗಿ ಸಮಾಜಕ್ಕೆ, ತಂದೆ, ತಾಯಿಗಳಿಗೆ, ಓದಿದ ಶಾಲೆಗೆ ಕೀರ್ತಿ ತರಬೇಕೆಂದು ಮಕ್ಕಳಿಗೆ ಸಾಲುಮರದ ತಿಮ್ಮಕ್ಕ ಸಲಹೆ ನೀಡಿದರು.
ಮುಖ್ಯ ಶಿಕ್ಷಕ ರಾಜಣ್ಣ, ವಾಸ ಸೈಂಟಿಪಿಕ್ ಕಂಪನಿಯ ಮಾಲೀಕ ಪ್ರಕಾಶ್ ಇದ್ದರು. ಶಾಲಾ ಮಕ್ಕಳಿಗೆ ಸಮವಸ್ತ್ರ ಸ್ಕೂಲ್ ಬ್ಯಾಗ್, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.