ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಾವಳಿ ತಡೆಯಬೇಕೆಂದು ಎಪಿಸಿಆರ್ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಒತ್ತಾಯಿಸಿದ್ದಾರೆ.
ಪಾಲಿಕೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು ಇತ್ತೀಚೆಗೆ ತುಮಕೂರು ನಗರದಲ್ಲಿ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಪರಿಣಾಮ ಬಾಲಕ ತುಂಬಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ಹಾಗೂ ಮೃತಪಟ್ಟವರಿಗೆ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಮುಖ್ಯ ರಸ್ತೆಗಳಲ್ಲದೇ ಒಳ ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ನಾಯಿ ಹಿಂಡು ತಿರುಗಾಡುತ್ತಿದ್ದರಿಂದ ಜನರಲ್ಲಿ ಆತಂಕ ಮೂಡಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರೆ ಸವಾರರ ಮೇಲೆಯೇ ದಾಳಿ ಮಾಡುತ್ತವೆ. ಮಕ್ಕಳು ರಸ್ತೆಯಲ್ಲಿ ಓಡಾಡುತ್ತಿದ್ದರೆ ದಿಢೀರ್ ದಾಳಿ ಮಾಡುತ್ತವೆ. ಇದರಿಂದ ಹಲವು ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಕಚ್ಛಾಡುವ ನಾಯಿಗಳ ಹಾವಳಿ ಯಿಂದ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಬಿಡಲು ಹಿಂಜರಿಯುವಂತಾಗಿದೆ. ಮನೆಗಳಿಂದ ಹೊರ ಬರಬೇಕಾದರೆ ಬೀದಿನಾಯಿಗಳು ಎಲ್ಲಿ ಓಡಿಸಿಕೊಂಡು ಬರುತ್ತವೋ ಎಂದು ನೋಡಿಕೊಂಡು ಹೊರಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳು ಮನೆಗಳಿಗೆ ತೆರಳಬೇಕಾದರೆ ಎಲ್ಲಿ ನಾಯಿ ಬಂದು ನಮ್ಮನ್ನು ಕಚ್ಚಿಬಿಡುತ್ತದೆಯೋ ಎಂಬ ಭಯದಿಂದ ಓಡಾಡುವಂತಹ ಪರಿಸ್ಥಿತಿ ಬಂದಿದೆ.
ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಅನಾಹುತಕ್ಕೆ ತಳ್ಳುವ ಮೊದಲೇ ಆಡಳಿತ ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬೀದಿ ನಾಯಿಗಳ ಅಟ್ಟಹಾಸ ನಿಯಂತ್ರಣ ಮಾಡಬೇಕು. ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆಸ್ಪತ್ರೆ ವ್ಯಚ್ಚವನ್ನು ಜಿಲ್ಲಾ ಆಡಳಿತ ಅಥವಾ ಮಹಾನಗರ ಪಾಲಿಕೆ ಭರಿಸಬೇಕು. ಒಂದು ವೇಳೆ ಬೀದಿ ನಾಯಿಗಳ ಹಾವಳಿ ಸಂಬಂಧ ನಿರ್ಲಕ್ಷ ವಹಿಸಿದರೆ ಮುಂದಿನ ದಿನ ಮಹಾನಗರ ಪಾಲಿಕೆಗೆ ಮುತ್ತಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ತುರ್ತಾಗಿ ಕೊಡಬೇಕು. ಸಾರ್ವಜನಿಕರಿಗೆ ಬೀದಿ ನಾಯಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾರ್ಡಿಗಳಿಗೆ ವಿಶೇಷ ತಂಡ ರಚಿಸಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.