ತುಮಕೂರು:ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕಾಲುವೆ ಕಾಮಗಾರಿ ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ತುಮಕೂರು ಜಿಲ್ಲಾ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತುಮಕೂರು ನಗರದಲ್ಲಿ ವಾಹನ ಸಂಚಾರ ಎಂದಿನಂತೆಯೇ ಇತ್ತು. ಆದರೆ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸಿದರು.
ನಗರದಲ್ಲಿ ವಿವಿಧ ಮಠಾಧೀಶರು, ರೈತ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಲಾರಿ ಚಾಲಕರು ಮತ್ತು ಮಾಲೀಕರ ಸಂಘ, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘ, ಧಾನ್ಯ ವರ್ತಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಬಂದ್‌ನ್ನು ಬೆಂಬಲಿಸಿದರು.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇನ್ನಿತರ ಸಂಘಟನೆಗಳ ಸಹಕಾರದಲ್ಲಿ ಕರೆದಿದ್ದ ತುಮಕೂರು ಬಂದ್ ಅಂಗವಾಗಿ ನೂರಾರು ಹೋರಾಟಗಾರರು, ನಾಗರಿಕರು ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡು,ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತುಮಕೂರು ಜಿಲ್ಲೆಯ ಹೇಮಾವತಿ ನೀರಿಗೆ ಕಂಕಟವಾಗಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಎರಡು ತಿಂಗಳಿನಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ ಎಂದರು.
ಪೈಪ್‌ಲೈನ್ ಅಳವಡಿಸುವಾಗಿ ರೈತರಿಗೆ ಭೂಮಿಗೆ ಪರಿಹಾರ ನೀಡದೆ, ಸ್ಥಳೀಯ ಗ್ರಾಮ ಪಂಚಾಯತಿಗಳ ಒಪ್ಪಿಗೆ ಪಡೆಯದೆ ದುಂಡಾವರ್ತನೆಯಿಂದ ನೀರು ತೆಗೆದುಕೊಂಡು ಹೋಗಲು ಹೊರಟಿದೆ. ಇದಕ್ಕೆ ನಮ್ಮ ವಿರೋಧವಿದೆ. ಕುಣಿಗಲ್ ತಾಲೂಕಿಗೆ ನೀರು ಒದಗಿಸುವ ಹೇಮಾವತಿ ಮೂಲ ನಾಲೆ ಅಧುನೀಕರಣಗೊಂಡಿದೆ. ಹಾಗಾಗಿ ಆ ನಾಲೆಯ ಮೂಲಕವೇ ಹುತ್ತರಿದುರ್ಗವಗರೆಗೆ ನಿಗದಿತ ನೀರು ತೆಗೆದುಕೊಂಡು ಹೋಗಬಹುದು. ಅನಗತ್ಯ ಖರ್ಚು ಮಾಡಿ, ಪೈಪ್‌ಲೈನ್ ಕಾಮಗಾರಿ ಕೈಬಿಡಬೇಕು. ಇಲ್ಲದಿದ್ದರೆ ಜನರು ಧಂಗೆ ಏಳುವ ಕಾಲ ದೂರವಿಲ್ಲ ಎಂದು ಎ.ಗೋವಿಂದರಾಜು ಎಚ್ಚರಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಇದು ತುಮಕೂರು ಜಿಲ್ಲೆಯ ಜೀವ ಜಲದ ಪ್ರಶ್ನೆಯಾಗಿದೆ. ಈಗಾಗಲೇ ಹೇಮಾವತಿ ನಾಲೆಯ 70ನೇ ಕಿ.ಮಿ.ನಿಂದ 228ನೇ ಕಿ.ಮಿ.ವರೆಗೆ ನಾಲೆಯನ್ನು ಅಧುನೀಕರಣಗೊಳಿಸಿದ್ದು, ನಿಗದಿಪಡಿಸಿದ ನೀರು ಹರಿಯಲು ಯಾವುದೇ ಸಮಸ್ಯೆಇಲ್ಲ. ಜಿಲ್ಲೆಗೆ ಆಗುವ ಅನ್ಯಾಯವನ್ನು ಅರಿತು ಇಂದಿನ ಹೋರಾಟಕ್ಕೆ ಮಠಾಧೀಶರು, ರೈತರು, ಕನ್ನಡಪರ ಸಂಘಟನೆಗಳ ಮುಖಂಡರು ಎಲ್ಲಾ ನಾಗರಿಕರು ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಸವಲಿಂಗ ಸ್ವಾಮಿಗಳು, ಗೊಲ್ಲಹಳ್ಳಿಯ ವಿದ್ಯಾಶಂಕರ ಸ್ವಾಮೀಜಿ, ಓಂಕಾರಮುನಿಸ್ವಾಮೀಜಿ, ತಿಪ್ಪೇರುದ್ರಸ್ವಾಮೀಜಿ ಪೂರ್ಣಾನಂದ ಆಶ್ರಮ ಕಲ್ಕರೆ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಪಂಚಾಕ್ಷರಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.