ಪ್ರತಿ ಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರನ್ನು ಎಸ್.ಟಿ. ಪಟ್ಟಿಗೆ ಸೇರಿಸುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ರಾಜಕೀಯ ಪಕ್ಷಗಳ ಮುಖಂಡರು ಕಾಡುಗೊಲ್ಲರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಕೇಂದ್ರದಲ್ಲಿರುವ ಎಸ್ಟಿ ಮೀಸಲಾತಿ ಪಟ್ಟಿಗೆ ಕಾಡುಗೊಲ್ಲರನ್ನು ಸೇರಿಸಲು ಶ್ರಮಿಸುವ ವ್ಯಕ್ತಿಗಳಿಗೆ ಕಾಡುಗೊಲ್ಲರ ಬೆಂಬಲ ಸಿಗಲಿದೆ ಎಂದು ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಅಧ್ಯಕ್ಷ ಜಿ.ಕೆ.ನಾಗಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು, ತುಮಕೂರು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಅಲ್ಲದೆ ರಾಜ್ಯದ ಸುಮಾರು ೩೭ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರು ನಿರ್ಣಾಯಕ ಮತದಾರರಾಗಿದ್ದಾರೆ. ಆದರೆ ಪ್ರತಿ ಬಾರಿಯ ಚುನಾವಣೆಯ ವೇಳೆ ಕಾಡುಗೊಲ್ಲರನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸುವ ನಾಟಕ ಮಾಡುವ ರಾಜಕೀಯ ಪಕ್ಷಗಳು, ಚುನಾವಣೆ ನಂತರ ಈ ವಿಚಾರವಾಗಿ ಚಕಾರ ಕೂಡ ಎತ್ತುವುದಿಲ್ಲ ಎಂದು ದೂರಿದರು.
2020ರ ಶಿರಾ ವಿಧಾನಸಭಾ ಉಪಚುನಾವಣೆಯ ವೇಳೆ ಅಸ್ಥಿತ್ವಕ್ಕೆ ಬಂದ ಕಾಡುಗೊಲ್ಲರ ಅಭಿವೃದ್ದಿ ನಿಗಮ ಇದುವರೆಗೂ ಸಮರ್ಪಕವಾಗಿ ಕಾರ್ಯಾರಂಭವಾಗಿಲ್ಲ. ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ಗೊಲ್ಲರ ಅಭಿವೃದ್ದಿ ನಿಗಮವಾಗಿ ಬದಲಾಯಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆದರೆ ಸಂಘದ ನಿರಂತರ ಹೋರಾಟದ ಫಲವಾಗಿ ಅದು ಸಾಧ್ಯವಾಗಿಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯದ ಸುಮಾರು 2 ಲಕ್ಷ ಮತದಾರರಿದ್ದಾರೆ. ಕಾಡುಗೊಲ್ಲ ಸಮುದಾಯದ ಪ್ರಮುಖ ಮುಖಂಡರು ಶೀಘ್ರದಲ್ಲಿಯೇ ಸಭೆ ನಡೆಸಿ, ಯಾವ ಪಕ್ಷದಿಂದ ಕಾಡುಗೊಲ್ಲ ಸಮುದಾಯಕ್ಕೆ ಸಂವಿಧಾನಾತ್ಮಕ ಮೀಸಲಾತಿ ಪಡೆಯಲು ಅನುಕೂಲವಾಗುತ್ತದೆಯೋ ಅಂತಹ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
೧೭ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಕುರಿತು ಸುದೀರ್ಘವಾಗಿ ರಾಜ್ಯಸಭೆಯಲ್ಲಿ ಮಾತನಾಡಿದವರು, ನರೇಂದ್ರಮೋದಿ ನೇತೃತ್ವದ ಸರ್ಕಾರ ಸ್ಪಂದಿಸಲಿಲ್ಲ.ರಾಜ್ಯದಲ್ಲಿ ಸುಮಾರು ೩೭ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತಗಳು ನಿರ್ಣಾಯಕವಾಗಿದ್ದರೂ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಒಬ್ಬರಿಗೂ ಟಿಕೇಟ್ ನೀಡಲಿಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಎರಡು ಪಕ್ಷಗಳಿಂದ ಕಾಡುಗೊಲ್ಲರಿಗೆ ಯಾವುದೇ ಒಳ್ಳೆಯ ಕೆಲಸಗಳು ಆಗಿಲ್ಲ. ಇದರಿಂದ ನಮ್ಮ ಸಮುದಾಯದ ಮತದಾರರು ಗೊಂದಲದಲ್ಲಿದ್ದಾರೆ ಎಂದು ಜಿ.ಕೆ.ನಾಗಣ್ಣ ನುಡಿದರು.
ಪ್ರತಿ ಹಂತದಲ್ಲಿಯೂ ಕಾಡುಗೊಲ್ಲರ ಹೆಸರಿನಲ್ಲಿ ಕಾಡುಗೊಲ್ಲರೊಂದಿಗೆ ಯಾವುದೇ ಸಂಬAಧವಿಲ್ಲದ ಊರುಗೊಲ್ಲರು ಅಧಿಕಾರ ಅನುಭವಿಸುತ್ತಿದ್ದಾರೆ. ಕಾಡುಗೊಲ್ಲರ ಎಸ್ಟಿ ಪಟ್ಟಿಗೆ ಸೇರಿಸುವ ಸಂಬAಧ ಪ್ರಮುಖ ಅಡ್ಡಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಮಾತಿಗೆ ಮನ್ನಣೆ ನೀಡುತ್ತಾ, ಕಾಡುಗೊಲ್ಲರ ಅಭಿವೃದ್ದಿ ನಿಗಮಕ್ಕೆ ಅನುದಾನವಾಗಲಿ, ಎಸ್ಟಿ ಪಟ್ಟಿಗೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹಾಕಲು ಸಹ ಮುಂದಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಹುಸಂಖ್ಯಾತರಾಗಿರುವ ಕಾಡುಗೊಲ್ಲರ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿ ಎಂದು ಹೇಳುವ ಕಾಂಗ್ರೆಸ್, ತಳ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡಲು ಸಿದ್ದರಿಲ್ಲ. ಸಚಿವರ ಮಕ್ಕಳು, ಮೊಮ್ಮಕ್ಕಳಿಗೆ ಎಂ.ಪಿ. ಟಿಕೇಟ್ ನೀಡಿ, ದ್ವನಿ ಇಲ್ಲದ ಸಮುದಾಯಗಳನ್ನು ಕಡೆಗಣಿಸಿದೆ. ಇವರಿಂದ ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಯೇ ಧರ್ಮ, ಧರ್ಮಗಳನ್ನು ಎತ್ತಿಕಟ್ಟಿ, ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಬಿಜೆಪಿಯಿಂದ ಸಹ ಶೋಷಿತ ಸಮುದಾಯಗಳಿಗೆ ಒಳಿತಾಗಿಲ್ಲ.
ಹಾಗಾಗಿ ಎಲ್ಲಾ ಶೋಷಿತ, ಬುಡಕಟ್ಟು ಸಮುದಾಯಗಳು ತಮ್ಮದೇ ಆದ ರಾಜಕೀಯ ಆಸ್ಥಿತ್ವವನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಶೀಘ್ರವೇ ಸಭೆ ಕರೆದು, 18ನೇ ಲೋಕಸಭಾ ಚುನಾವಣೆಯಲ್ಲಿ ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಿ, ಮೀಸಲಾತಿ ಕಲ್ಪಿಸುವರೋ ಅವರಿಗೆ ನಮ್ಮ ಬೆಂಬಲ ನೀಡುವ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿ.ಕೆ.ನಾಗಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಸುನಿಲ್ ಕುಮಾರ್ ಇದ್ದರು.