ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರು ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜೆ.ಸಿ.ಮಾಧುಸ್ವಾಮಿ ಇಷ್ಟೆಲ್ಲಾ ಆಗಲು ಯಡಿಯೂರಪ್ಪನವರು ಕಾರಣ ಎಂದು ಹೇಳಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿರುವ ಜೆ.ಸಿ.ಮಾಧುಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಗೋಪಾಲಯ್ಯ ನಮ್ಮ ಮನೆಗೆ ಬಂದಿದ್ದರು. ಅವರ ಮೇಲೆ ನನಗೆ ಸಿಟ್ಟಿಲ್ಲ. ನನಗೆ ಯಡಿಯೂರಪ್ಪನವರ ಮೇಲೆ ಸಿಟ್ಟು, ಬೇಸರ ಇದೆ ಎಂದು ಅಸಮಾಧಾನ ಹೊರ ಹಾಕಿದರು.
ನಿಮ್ಮಿಂದ ನನಗೆ ಅನ್ಯಾಯ ಆಗಿಲ್ಲ. ಯಡಿಯೂರಪ್ಪರ ನವರು ಮಾತಾಡಬಹುದಿತ್ತು ಎಂದು ನನ್ನ ಮನೆಗೆ ಬಂದಿದ್ದ ಆರ್. ಅಶೋಕ ಅವರಿಗೆ ಈ ವಿಚಾರ ತಿಳಿಸಿದ್ದೇನೆ. ಆರ್.ಅಶೋಕ ದಯವಿಟ್ಟು ಪಕ್ಷ ತೊರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ನಾನು ಅಷ್ಟೊಂದು ಮುಂದುವರೆದಿಲ್ಲ ಎಂದು ತಿಳಿಸಿದೆ ಎಂದಿದ್ದಾರೆ.
ಈಗಲೂ ಹೇಳುತ್ತೇನೆ, ಹೊರಗಿನಿಂದ ಬಂದ ಸೋಮಣ್ಣ ಅವರಿಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ. ಜಿಲ್ಲೆಯನ್ನು ಯಾಕೆ ಈ ರೀತಿ ಅಡ ಇಡುತಿದ್ದಾರೋ ಗೊತ್ತಿಲ್ಲ. ಸೋಮಣ್ಣಗೆ ಹೊರತುಪಡಿಸಿ, ಮುದ್ದಹನುಮೇಗೌಡರೂ ಬಿಜೆಪಿಯಲ್ಲಿ ಇದ್ದರೂ ನಾನು ಬೆಂಬಲ ನೀಡುತ್ತಿದ್ದೆ. ಆದರೆ ಸೋಮಣ್ಣ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೊರಗಡೆಯಿಂದ ಬಂದವರೆಂಬ ಕಾರಣಕ್ಕೆ ಕಳೆದ ಬಾರಿ ನಾವು ಸೋಲಿಸಿದ್ದೇವೆ. ಈಗ ವಲಸಿಗ ಸೋಮಣ್ಣರನ್ನು ಗೆಲ್ಲಿಸಿಕೊಂಡು ಬರಲು ಆಗುತ್ತದಾ ಎಂದು ಪ್ರಶ್ನಿಸಿದ ಮಾಧುಸ್ವಾಮಿ, ಸೋಮಣ್ಣ ಬಂದು ತುಮಕೂರು ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಅನ್ನೋದು ಸುಳ್ಳು, ಇವೆಲ್ಲಾ ಬೊಗಳೆ ಮಾತುಗಳು ಎಂದು ವಾಗ್ದಾಳಿ ನಡೆಸಿದರು.
ಈಗ ನಾನು ಗೊಂದಲದಲ್ಲಿ ಇದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಮುಖ್ಯ. ಹಾಗಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇನೆ. ಪ್ರತಿದಿನ ಬ್ಯಾಚ್ ವೈಸ್ ಸಭೆ ನಡೆಸುತ್ತಿದ್ದೇನೆ. ಅವರ ಅಭಿಪ್ರಾಯ ಸಂಗ್ರಹ ಮಾಡಿ ಇನ್ನು ಎರಡು ಮೂರು ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದವರು ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಬಿ ಫಾರ್ಮ್ ಕೊಟ್ಟರೂ, ಬಿಜೆಪಿಯವರು ಬಿ ಪಾರ್ಮ್ ಕೊಟ್ಟರೂ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನಾನು ಸ್ಪರ್ಧಿಸುವ ಆಸೆಯನ್ನೇ ಬಿಟ್ಟಿದ್ದೇನೆ. ಹೀಗಿದ್ದರೂ, ಮಾಧ್ಯಮದಲ್ಲಿ ಏಕೆ ಹೀಗೆ ಸುದ್ದಿ ಪ್ರಸಾರ ಆಗುತ್ತಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಇಲ್ಲದ ಕೆಲವರು ಆಹ್ವಾನ ಕೊಟ್ಟಿದ್ದಾರೆ. ಕಾಂಗ್ರೆಸ್ ನ ತೀರ್ಮಾನ ತೆಗೆದುಕೊಳ್ಳುವ ಯಾವ ನಾಯಕರೂ ನನಗೆ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಗೆ ಹೋಗ್ತಿನಿ ಅಥವಾ ಹೋಗಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ನನಗೆ ಕಾಂಗ್ರೆಸ್ ಗೆ ಬರುವಂತೆ ಯಾರೂ ಆಮಿಷನೂ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.