ಪ್ರಬಲ ಆಕಾಂಕ್ಷಿಯಾಗಿದ್ದರೂ, ನೋವನ್ನು ಮರೆತು ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡುತ್ತಿರುವ ಎಸ್.ಪಿ.ಚಿದಾನಂದ ಅವರಿಗೆ ಪಕ್ಷ ಚುನಾವಣೆಯ ನಂತರ ಒಳ್ಳೆಯ ಹುದ್ದೆಯನ್ನು ನೀಡಲಿದೆ ಎಂಬ ನಂಬಿಕೆ ನಮಗಿದೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.
ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಎಸ್.ಪಿ.ಚಿದಾನಂದ ಮನಗೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, ಅವರಿಗೆ ಲೋಕಸಭೆಯ ಟಿಕೇಟ್ ದೊರೆಯಬೇಕಾಗಿತ್ತು. ಕೊನೆಯ ಕ್ಷಣದ ಬದಲಾವಣೆಯಿಂದ ನನಗೆ ಟಿಕೇಟ್ ನೀಡಿದ್ದಾರೆ. ಚಿದಾನಂದ ಅವರು ಸಹ ತಮ್ಮ ನೋವನ್ನು ಪಕ್ಷದ ವರಿಷ್ಠರು ಮತ್ತು ನಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಅವರಿಗೆ ಕಾದಿದೆ ಎಂದು ಹೇಳಿದರು.
ನೋವಿನ ನಡುವೆಯೂ ಎಸ್.ಪಿ.ಚಿದಾನಂದ ನಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಒಂದುಕಡೆ ಶಾಸಕ ಜಿ.ಬಿ.ಜೋತಿಗಣೇಶ್, ಮತ್ತೊಂದು ಕಡೆ ಎಸ್.ಪಿ. ಚಿದಾನಂದ ಸರಿಸಮನಾಗಿ ಪಕ್ಷದ ಗೆಲುವಿಗೆ ದುಡಿಯಲು ಮುಂದಾಗಿದ್ದಾರೆ. ಅವರ ನಿಷ್ಕಲ್ಮಷ ಪ್ರೀತಿ ಮತ್ತು ಹೃದಯ ವೈಶಾಲತೆಗೆ ಧಕ್ಕೆಯಾಗದ ರೀತಿ ನಡೆಸಿಕೊಳ್ಳುತ್ತೇನೆ ಎಂಬ ಮಾತನ್ನು ಅವರಿಗೆ ನೀಡಿದ್ದೇನೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿಂದುಳಿದ ವರ್ಗಗಳ ನಾಯಕರಾಗಿ ಬೆಳೆಯಲಿದ್ದಾರೆ ಎಂದರು.
ನಾನು ಹೊರಗಿನವನು ಎಂಬುದರಲ್ಲಿ ಅರ್ಥವಿಲ್ಲ. ತುಮಕೂರಿನ ಮೂಲ ಎಂದರೆ ಐದಾರು ಸಾವಿರ ಜನ ದೊರೆಯಬಹುದು. ಹಾಗೆ ನೋಡಿದರೆ ಬೆಂಗಳೂರಿಗೂ ನಾನು ಹೊರಗಿನವನು. ನನ್ನನ್ನು ಹೊರಗಿನವ ಎಂದು ಪ್ರಚಾರ ಮಾಡುತ್ತಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವಾಗಿ ಪಕ್ಷದ ಕಾರ್ಯಕರ್ತರು, ಮತದಾರರು ನೀಡಲಿದ್ದಾರೆ ಎಂದು ತಿಳಿಸಿದರು.
ಸ್ಪೂರ್ತಿ ಚಿದಾನಂದ ಮಾತನಾಡಿ, ಕಳೆದ 10-15 ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆಗೆ ದುಡಿದ ನನಗೆ ಟಿಕೇಟ್ ಕೈತಪ್ಪಿದ್ದರ ಬಗ್ಗೆ ನೋವಿತ್ತು. ನಮಗೆ ಬೇರೆ ಪಕ್ಷವಿಲ್ಲ. ಬಹಳ ದೂರದೃಷ್ಟಿ ಇಟ್ಟುಕೊಂಡು ದೇಶವನ್ನು ಹಂತ ಹಂತವಾಗಿ ಮೇಲಕ್ಕೆ ತೆಗೆದುಕೊಂಡು ಹೋಗುತ್ತಿರುವ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಮಲ್ಲಸಂದ್ರ ಶಿವಣ್ಣ, ಪಂಚಾಕ್ಷರಯ್ಯ ಇದ್ದರು.