Tuesday, January 28, 2025
Google search engine
Homeಮುಖಪುಟಲೋಕಸಭಾ ಚುನಾವಣೆ - ಕರ್ನಾಟಕದಲ್ಲಿ ಏಪ್ರಿಲ್ 26, ಮೇ 07ರಂದು 2 ಹಂತದಲ್ಲಿ ಮತದಾನ

ಲೋಕಸಭಾ ಚುನಾವಣೆ – ಕರ್ನಾಟಕದಲ್ಲಿ ಏಪ್ರಿಲ್ 26, ಮೇ 07ರಂದು 2 ಹಂತದಲ್ಲಿ ಮತದಾನ

ಭಾರತದ 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 07ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.ಮತ ಎಣಿಕೆ ಜೂನ್ 04ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತ ಏಪ್ರಿಲ್ 19ರಂದು, ಎರಡನೇ ಹಂತ ಏಪ್ರಿಲ್ 26ರಂದು, ಮೂರನೇ ಹಂತ ಮೇ 07ರಂದು, ನಾಲ್ಕನೇ ಹಂತ ಮೇ 13ರಂದು, ಐದನೇ ಹಂತ ಮೇ 20ರಂದು, ಆರನೇ ಹಂತ ಮೇ 25ರಂದು ಮತ್ತು ಕೊನೆಯ ಏಳನೇ ಹಂತ ಜೂಣ್ 01ರಂದು ನಡೆಯಲಿದೆ ಎಂದರು.

ಕರ್ನಾಟಕದಲ್ಲಿ ಏಪ್ರಿಲ್ 26ರಂದು 14 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಮೇ 07ರಂದು 14 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ ಛತ್ತೀಸ್ ಗಡ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ತಮಿಳುನಾಡು, ರಾಜಸ್ಥಾನವೂ ಸೇರಿದಂತೆ ಇತರೆ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ನ್ಯಾಯಸಮ್ಮತವಾಗಿ ನಡೆಯಲು ದೇಶಾದ್ಯಂತ 2100 ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ 97 ಕೋಟಿ ಮತದಾರರಿದ್ದು, ಅವರ ಪೈಕಿ 80 ವರ್ಷ ದಾಟಿದವರು 1.90 ಕೋಟಿ ಮತದಾರರಿದ್ದಾರೆ. 85 ವರ್ಷ ದಾಟಿದ ಮತದಾರರು 82 ಲಕ್ಷ, ಮಹಿಳಾ ಮತದಾರರು 47.16 ಕೋಟಿ, ಶತಾಯುಷಿ ಮತದಾರರು 2.18 ಲಕ್ಷ, ಯುವ ಮತದಾರರ ಸಂಖ್ಯೆ 19.74 ಕೋಟಿ, ವಯೋವೃದ್ಧ ಮತದಾರರ ಸಂಖ್ಯೆ 82 ಲಕ್ಷ, ತೃತೀಯ ಲಿಂಗಿ ಮತದಾರರು 48 ಸಾವಿರ, ವಿಶೇಷ ಚೇತನ ಮತದಾರರು 88.4 ಲಕ್ಷ, ಮೊದಲ ಬಾರಿಗೆ ಮತದಾನ ಮಾಡುವ ಮತದಾರರು 1.8 ಕೋಟಿ ಇದ್ದಾರೆ ಎಂದು ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಪ್ರಚಾರ ಮಾಡಲು ಬರುವ ಸ್ಟಾರ್ ಕ್ಯಾಂಪೇನರ್ ಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ಜಾತಿ, ಧರ್ಮದ ಮೇಲೆ ಮತವನ್ನು ಕೇಳುವಂತಿಲ್ಲ. ಪ್ರಚಾರದಲ್ಲಿ ಅಭ್ಯರ್ಥಿಗಳು ದ್ವೇಷ ಭಾಷಣಗಳನ್ನು ಮಾಡುವಂತಿಲ್ಲ. ಗಲಭೆ, ಗಲಾಟೆಗಳಲ್ಲಿ ಭಾಗಿಯಾದರೆ ಜಾಮೀನುರಹಿತ ವಾರಂಟ್ ನೀಡಲಾಗುವುದು. ಕ್ರಿಮಿನಲ್ ಹಿನ್ನೆಲೆ ಇರುವವರು ಕೇಸ್ ಬಗ್ಗೆ ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು. ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ಪ್ರತಿನಿತ್ಯವೂ ಬ್ಯಾಂಕ್ ಗಳ ವಹಿವಾಟಿನ ಬಗ್ಗೆ ಮಾಹಿತಿ ನೀಡಬೇಕು. ಸುಳ್ಳು ಸುದ್ದಿ ಹರಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೋನ್ ಪೇ, ಗೂಗಲ್ ಪೇ ಮೇಲೂ ಈ ಬಾರಿ ಹದ್ದಿನ ಕಣ್ಣು ಇಡಲಾಗುವುದು. ಹಣ ಸಾಗಿಸುವ ಬ್ಯಾಂಕ್ ವಾಹನಗಳಿಗೆ ಸಂಜೆ ನಂತರ ನಿರ್ಭಂಧ ಹೇರಲಾಗಿದೆ ಎಂದು ಹೇಳಿದ್ದಾರೆ.

ಪ್ರಚಾರದ ಹೆಲಿಕಾಪ್ಟರ್ ಮತ್ತು ಖಾಸಗಿ ವಿಮಾನಗಳು ಲ್ಯಾಂಡ್ ಆದರೆ ಪರಿಶೀಲನೆ ನಡೆಸಲಾಗುವುದು. ಸಾಮಾಜಿಕ ಜಾಲ ತಾಣಗಳ ಮೇಲೆ ಆಯೋಗ ಕಣ್ಣಿಡಲಿದೆ. ಗಡಿ ಪ್ರದೇಶಗಳಲ್ಲಿ ಡ್ರೋಣ್ ಮೂಲಕ ನಿಗಾ ವಹಿಸಲಾಗುವುದು. ಚುನಾವಣೆಯಲ್ಲಿ ಸೀರೆ, ಕುಕ್ಕರ್, ಮದ್ಯ ಹಂಚಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular