Monday, September 16, 2024
Google search engine
Homeಮುಖಪುಟಟಿಕೆಟ್ ಕೊಡಿಸದ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆ.ಸಿ.ಮಾಧುಸ್ವಾಮಿ

ಟಿಕೆಟ್ ಕೊಡಿಸದ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆ.ಸಿ.ಮಾಧುಸ್ವಾಮಿ

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಬಿ.ಎಸ್.ಯಡಿಯೂರಪ್ಪ ನನ್ನನ್ನು ಬಲಿಕೊಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ. ಅಪ್ಪ ಮಕ್ಕಳಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ ಮೇಲೆಯೇ ನಾನು ಕೂಡ ತುಮಕೂರು ಲೋಕಸಭಾ ಆಕಾಂಕ್ಷಿ ಎಂದು ಹೇಳಿದೆ. ಆದರೆ ಯಡಿಯೂರಪ್ಪ ನನ್ನನ್ನು ನಡುನೀರಿನಲ್ಲಿ ಕೈಬಿಟ್ಟರು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯಡಿಯೂರಪ್ಪನವರು ಎರಡು ಮೂರು ಸಲ ಕರೆಸಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡುವಂತೆ ನನಗೆ ಹೇಳಿದರು. ನಮಗೆ ಇಂತಹವರು ಮಾಡಲ್ಲ ಅಂದರು. ನಾವು ಅವರನ್ನು ಸಮಾಧಾನ ಮಾಡುತ್ತೇನೆ. ನೀವು ತಯಾರಾಗಿ ಎಂದು ಹೇಳಿದರು. ಆದರೆ ನಮ್ಮ ಪರ ಟಿಕೆಟ್ ಕೊಡಿಸಲಿಕ್ಕೆ ಹೋರಾಟ ಮಾಡಲ್ಲ ಎನ್ನುವುದು ಮನಸ್ಸಿಗೆ ಬಹಳ ನೋವಾಗಿದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನನಗೆ ಹೇಳಿದ ಮೇಲೆಯೇ ನಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದು, ನಿನಗೆ ಬಿ ಫಾರ್ಮ್ ತಂದು ಕೊಡುವ ಜವಾಬ್ದಾರಿ ನನ್ನದೆ ಎಂದು ಯಡಿಯೂರಪ್ಪ ಹೇಳಿದ್ದರು. ನಾನು ದೆಹಲಿಗೆ ಹೋಗುವುದಾಗಿ ಹೇಳಿದೆ. ಇದಕ್ಕೆ ನೀನು ಯಾಕಪ್ಪ ಹೋಗುತ್ತೀಯಾ, ಹೋಗುವುದು ಬೇಡ ಎಂದಿದ್ದರು. ನಾನು ಅದಕ್ಕೆ ಮಾಧ್ಯಮಗಳ ಮುಂದೆ ದೃಢವಾಗಿ ಹೇಳುತ್ತಿದ್ದೆ. ಚುನಾವಣಾ ಕಾವು ಏರಲಿ, ಚುನಾವಣೆ ದಿನಾಂಕ ಗೊತ್ತಾದ ಮೇಲೆ ಸಭೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ವಿ.ಸೋಮಣ್ಣ ಅವರ ಪರವಾಗಿ ಪ್ರಚಾರ ಮಾಡುವುದಿಲ್ಲ. ಈ ವಿಷಯವನ್ನು ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಅಷ್ಟೇ ಅಲ್ಲ, ಹೊರಗಿನವರಿಗೆ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಪ್ರಚಾರ ಮಾಡುತ್ತಿರಲಿಲ್ಲ. ಈ ಜಿಲ್ಲೆಯಲ್ಲಿ ಯಾರಿಗೆ ಕೊಟ್ಟಿದ್ದರೂ ನಾನು ಪ್ರಚಾರ ಮಾಡುತ್ತಿದ್ದೆ ಎಂದರು.

ನನ್ನನ್ನು ನಂಬಿಕೊಂಡಿರುವವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಬೇಕಲ್ಲ ಎಂದು ಹೇಳಿದ ಮಾಧುಸ್ವಾಮಿ, ನಮ್ಮ ಕಾರ್ಯಕರ್ತರು ತಟಸ್ಥವಾಗಿ ಇರೋಣ ಎಂದರೆ ತಟಸ್ಥವಾಗಿ ಇರುತ್ತೇನೆ. ಇಲ್ಲ ನಮಗೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ಕೊಡಬೇಕು ಎಂದರೆ ಅದನ್ನು ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಬೇರೆ ಕಡೆ ಹೋಗುವ ಬಗ್ಗೆ ಯೋಚನೆ ಮಾಡಿದ್ದು ನಿಜ. ಅದಕ್ಕೆ ಒಂದೆರಡು ತಿಂಗಳ ಹಿಂದೆ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ನನ್ನಷ್ಟಕ್ಕೆ ನಾನು ನಿರ್ಧಾರ ತೆಗೆದುಕೊಳ್ಳವುದು ಇಲ್ಲ. ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಕ್ಕೂ ಆಗುವುದಿಲ್ಲ. ಎಲ್ಲಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರ ಅಭಿಪ್ರಾಯ ತೆಗೆದುಕೊಳ್ಳಬೇಕು. ಇಷ್ಟೆಲ್ಲಾ ಆದ ಮೇಲೂ ಇಲ್ಲಿ ನಮಗೆ ರಕ್ಷಣೆ ಇಲ್ಲ. ಹೀಗಾಗಿ ಇಲ್ಲಿ ಇರಬೇಕಾ ಬೇಡ್ವಾ ಎಂಬ ಚಿಂತೆಯಾಗಿದೆ ಎಂದು ನೋವು ತೋಡಿಕೊಂಡರು.

ಕಾಂಗ್ರೆಸ್ ಗೆ ಹೋಗುವುದು ಸುರಕ್ಷಿತವಲ್ಲ. ಜೊತೆಗೆ ಬಿಜೆಪಿಯಲ್ಲಿ ಇರುವುದು ಸುರಕ್ಷಿತವಲ್ಲ ಎಂದು ನಾನು ಅಂದುಕೊಂಡಿಲ್ಲ. ಮುಂದಿನ ನಡೆ ಹೇಗಿರಬೇಕು ಎಂಬುದು ನನಗೆ ಅರ್ಥ ಆಗಿಲ್ಲ. ನಾನು ಯಾವ ಪಕ್ಷಕ್ಕೆ ಹೋಗಬೇಕೆಂಬ ಎಂಬ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತೇನೆ. ಚುನಾವಣೆ ಪ್ರಕ್ರಿಯೆಗಳ ಆರಂಭವಾದ ಮೇಲೆ ಸಭೆ ಕರೆಯುತ್ತೇನೆ ಎಂದರು.

ನಮ್ಮ ಕಾರ್ಯಕರ್ತರು ಅವಮಾನ ಆದರೂ ಪರವಾಗಿಲ್ಲ ಸಹಿಸಿಕೊಂಡು ಇಲ್ಲೇ ಇರಿ ಎಂದರೂ ಇರುತ್ತೇನೆ. ಆದರೆ ಅವಮಾನ ಸಹಿಸುವುದಕ್ಕೆ ಆಗುವುದಿಲ್ಲ. ಬೇರೆ ದಿಕ್ಕು ನೋಡಿಕೊಳ್ಳಿ ಎಂದರೂ ನೋಡಿಕೊಳ್ಳುತ್ತೇನೆ. ತಕ್ಷಣಕ್ಕೆ ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ಪಕ್ಷ ನನಗೇನು ಕೆಟ್ಟದ್ದು ಮಾಡಿಲ್ಲ ಎಂದು ಹೇಳಿದ್ದಾರೆ.

ಈಶ್ವರಪ್ಪನವರ ಮಗನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಈಶ್ವರಪ್ಪ ಅಸಮಾಧಾನ ಹೊರಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಮೇಲ್ನೋಟಕ್ಕೆ ನೋಡಿದವರಿಗೆ ಇದು ಸರಿ ಅನಿಸುತ್ತದೆ. ಯಡಿಯೂರಪ್ಪ ನಮ್ಮನ್ನೆಲ್ಲಾ ತೆಗೆದುಕೊಂಡು ಹೋಗಿ ಬಲಿ ಕೊಟ್ಟರು ಎಂದ ಕಿಡಿ ಕಾರಿದರು.

ಸೋಮಣ್ಣನವರ ನಾಲಿಗೆಗೆ, ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡಿದ್ದಾರೆ. ನನ್ನನ್ನು ಬಲಿಯಾಕಿ ಸೋಮಣ್ಣನಿಗೆ ಟಿಕೆಟ್ ಕೊಡಿಸಿದ್ದಾರೆ. ಇದರಿಂದ ನನಗೆ ನೋವಾಗಿದೆ. ಯಡಿಯೂರಪ್ಪನವರಿಗೆ ಮಾಧುಸ್ವಾಮಿ, ಈಶ್ವರಪ್ಪನವರನ್ನು ಕಟ್ಟಿಕೊಂಡು ಏನಾಗಬೇಕಾಗಿದೆ. ಅಪ್ಪ ಮಕ್ಕಳಿಗೆ ಸ್ವ ಹಿತಾಸಕ್ತಿಯೇ ಹೆಚ್ಚಾಗಿರಬೇಕು ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular