ತುಮಕೂರು ಲೋಕಸಭಾ ಕ್ಷೇತ್ರವನ್ನು ನಾನು ಬಯಸಿರಲಿಲ್ಲ. ಹೈಕಮಾಂಡ್ ನನಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ಪಕ್ಷದ ತುಮಕೂರು ಲೋಕಸಭಾ ಕ್ಷೇತ್ರ‍್ದ ಅಬ್ಯರ್ಥಿ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ದೊಡ್ಡ ಪಕ್ಷದಲ್ಲಿ ಭಿನ್ನಮತ ಸಹಜ. ಅದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಮ್ಮದೆನಿದ್ದರೂ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ತುಮಕೂರಿನ ಕೊಡುಗೆ ಇರಬೇಕು ಎಂಬುದಾಗಿದೆ. ಇದನ್ನು ಬಿಟ್ಟು ಬೇರೆನಿಲ್ಲ ಎಂದರು.
ತುಮಕೂರು ಜಿಲ್ಲೆ ಅತಿವೇಗವಾಗಿ ಬೆಳೆಯತ್ತಿರುವ ಜಿಲ್ಲೆ. ಇಲ್ಲಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ದೊರೆಯಬೇಕು ಎಂಬುದು ನಮ್ಮ ದೂರದೃಷ್ಟಿ. ಬೆಂಗಳೂರಿನಿಂದ ತುಮಕೂರಿನವರೆಗೆ ಪ್ಲೇಓವರ್ ಹಾಗೆಯೇ ಮೆಟ್ರೋ ರೈಲು ಬರಬೇಕೆಂಬ ಕನಸಿನ ಜೊತೆಗೆ, ತುಮಕೂರನ್ನು ಮತ್ತೊಂದು ವಾರಣಾಸಿ ಮಾಡಬೇಕೆಂಬ ಕನಸಿದೆ. ಅವಕಾಶ ಸಿಕ್ಕರೆ ಈ ಕನಸನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಸಿ.ನಾಗೇಶ ಮನೆಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿ, ತಿಪಟೂರಿನ ಕರೆಗೋಡಿ ರಂಗಾಪ್ಮರ ಮಠಕ್ಕೂ ಭೇಟಿ ನೀಡಿ ಮಾತುಕತೆ ನಡೆಸಲಿದ್ದೇನೆ ಎಂದು ವಿ.ಸೋಮಣ್ಣ ತಿಳಿಸಿದರು.
ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ಮಾರ್ಚ್ 14ರಂದು ದೂರವಾಣಿ ಕರೆ ಮಾಡಿದ್ದೆ. ಆದರೆ ಅವರು ಈಗ ಬರುವುದು ಬೇಡ ಎಂದು ಸ್ವಲ್ಪ ಬೇಸರದಿಂದಲೇ ಮಾತನಾಡಿದರು. ಇನ್ನು 3-4 ದಿನ ಕಳೆದ ಬಳಿಕ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಎಲ್ಲವೂ ಸರಿ ಹೋಗಲಿದೆ. ಪಕ್ಷದ ನಾಯಕರು ಎಲ್ಲವನ್ನೂ ಸರಿ ಮಾಡಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು, ಮುಖಂಡರುಗಳು ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ. ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಸಂಕಲ್ಪ ನಮ್ಮೆಲ್ಲರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ.ಸುರೇಶಗೌಡ, ಜ್ಯೋತಿಗಣೇಶ್, ಮುಖಂಡರಾದ ರವಿಶಂಕರ್ ಹೆಬ್ಬಾಕ, ಎಂ.ಡಿ. ಲಕ್ಷ್ಮೀ ನಾರಾಯಣ್, ಶಿವಪ್ರಸಾದ್, ಮಧುಗಿರಿ ಮಾಜಿ ಶಾಸಕ ವೀರಭದ್ರಯ್ಯ, ಗುಬ್ಬಿ ಹೊನ್ನಗಿರಿಗೌಡ, ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಬಾವಿಕಟ್ಟೆ ನಾಗಣ್ಣ, ರಾಜಪ್ಪ, ಡಾ. ಪರಮೇಶ್, ರುದ್ರೇಶ ಇದ್ದರು.