ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಮೂರು ತಿಂಗಳು ಕಳೆದರೂ ಅಂಕಪಟ್ಟಿಗಳನ್ನು ನೀಡದೆ ತುಮಕೂರು ವಿಶ್ವವಿದ್ಯಾಲಯ ವಿಳಂಬ ಧೋರಣೆ ಅನುಸುತ್ತಿದೆ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಈ. ಶಿವಣ್ಣ ಖಂಡಿಸಿದ್ದಾರೆ. ಶೀಘ್ರವೇ ಅಂಕಪಟ್ಟಿ ಹಾಗೂ ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಸಮಯಕ್ಕೆ ಸರಿಯಾಗಿ ಪದವಿ ಫಲಿತಾಂಶಗಳು ಹಾಗೂ ಅಂಕಪಟ್ಟಿಗಳು, ಘಟಿಕೋತ್ಸವ ಪ್ರಮಾಣಪತ್ರ ನೀಡದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ಜನ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿದ್ದು ಅವರು ಯಾವುದೇ ಸರ್ಕಾರಿ ಕೆಲಸಕ್ಕೆ ಹೋಗಲು ತೊಂದರೆಯಾಗುತ್ತಿದೆ. ಇತ್ತೀಚೆಗೆ ಹಲವಾರು ವಿದ್ಯಾರ್ಥಿಗಳು ವಿವಿಧ ಇಲಾಖೆಗಳಿಗೆ ಸರ್ಕಾರಿ ಕೆಲಸಗಳಿಗೆ ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣ ಪತ್ರ ಇಲ್ಲದೆ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುವಂತೆ ಆಗಿದೆ ಎಂದು ದೂರಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಲ್ಲಿ ಪರಿಣಿತರು ಇಲ್ಲದೆ ಇರುವುದು ಮತ್ತು ಸರಿಯಾಗಿ ಕರ‍್ಯನಿರ್ವಹಣೆ ಇಲ್ಲದಿರುವುದರಿಂದ ಮತ್ತು ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಇರುವುದು ಕೂಡ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಹೇಳಿದ್ದಾರೆ.
ಬಹುತೇಕ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಕೆಲಸಗಳು ಪೂರ್ಣಗೊಳ್ಳದೆ ವಿವಿ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಕೆಲಸಕ್ಕೆ ವಿಳಂಬ ಮಾಡುತ್ತಿರುವ ಪರೀಕ್ಷಾ ವಿಭಾಗದ ಸಿಬ್ಬಂದಿಗಳು ಬದಲಾವಣೆ ಮಾಡಿ ನುರಿತ ಸಿಬ್ಬಂದಿಯನ್ನು ನೇಮಕ ಮಾಡಿ ವಿದ್ಯಾರ್ಥಿಗಳ ಹಿತರಕ್ಷಣೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.