ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಮಾಡಿಕೊಂಡಿದ್ದು ದೆಹಲಿಯ ಒಟ್ಟು 7 ಕ್ಷೇತ್ರಗಳ ಪೈಕಿ ಎಎಪಿಗೆ 4 ಮತ್ತು ಕಾಂಗ್ರೆಸ್ ಗೆ 3 ಮೂರು ಸೀಟುಗಳನ್ನು ಹಂಚಿಕೆಯಾಗಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಭಯ ಪಕ್ಷಗಳ ಮುಖಂಡರು ದೆಹಲಿ, ಚಂಡೀಗಢ, ಹರ್ಯಾಣ, ಪಂಜಾಬ್ ಮತ್ತು ಗುಜರಾತ್ ನಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಲಾ ಏಳು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.
ದೆಹಲಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್, ಎಎಪಿಯು ಹೊಸ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯಲ್ಲಿ ಸ್ಪರ್ಧಿಸಲಿದೆ. ಚಾಂದಿನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯವ್ಯ ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಗುಜರಾತ್ ನಲ್ಲಿ ಆದ್ಮ ಆದ್ಮಿ ಪಕ್ಷವು ಬರೂಚ್ ಮತ್ತು ಭಾವನಗರ ಕ್ಷೇತ್ರಗಳಲ್ಲಿ ಸ್ಪರ್ಧಗೆ ಇಳಿಯಲಿದೆ. ಉಳಿದ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಹರ್ಯಾಣಲದಲ್ಲಿ ಎಎಪಿ ಕುರುಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಗೋವಾದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದರು.
ಚಂಡೀಗಢದಲ್ಲಿ ಒಂದು ಸೀಟು ಕಾಂಗ್ರೆಸ್ ಪಡೆದುಕೊಂಡಿದೆ. ಎಎಪಿ ನಾಯಕ ಸಂದೀಪ್ ಪಾಟಕ್ ಮಾತನಾಡಿ, ಪಂಜಾಬ್ ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಸೀಟು ಹಂಚಿಕೆ ಮಾಡಿಕೊಂಡಿಲ್ಲ. ಹಾಗಾಗಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿವೆ ಎಂದು ಸ್ಪಷ್ಟಪಡಿಸಿದರು.
ವಾಸ್ನಿಕ್ ಮಾತನಾಡಿ, ಎರಡೂ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕ ಚಿಹ್ನೆಗಳ ಮೇಲೆ ಸ್ಪರ್ಧಿಸಲಿವೆ. ದೆಹಲಿಯಲ್ಲಿ ಎಲ್ಲಾ ಏಳು ಸೀಟುಗಳನ್ನು ಗೆಲ್ಲಲು ಕೆಲಸ ಮಾಢುತ್ತೇವೆ ಎಂದು ತಿಳಿಸಿದರು.