ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ನಿಂದ ಕಣಕ್ಕೆ ಇಳಿಸುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರ ವಿರೋಧಿಗಳು ತುಮಕೂರಿನಲ್ಲಿ ಗುಪ್ತ ನಡೆಸಿದ್ದಾರೆ. ಸಭೆಯಲ್ಲಿ ಮುದ್ದಹನುಮೇಗೌಡರನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಗುಪ್ತಸಭೆ ಮಧ್ಯಾಹ್ನ 3.40ರವರೆಗೂ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೂ ಮೊದಲೇ ಅವರ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆ.20ರಂದು ತುಮಕೂರಿನಲ್ಲಿ ಮುದ್ದಹನುಮೇಗೌಡರ ವಿರೋಧಿ ಗುಂಪು ಮುರಳೀಧರ ಹಾಲಪ್ಪ ಮತ್ತು ಮಾಜಿ ಶಾಸಕ ಗೌರಿಶಂಕರ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ನೇತೃತ್ವದಲ್ಲಿ ಗುಪ್ತಸಭೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರಿಗೆ ಟಿಕೆಟ್ ನೀಡಬೇಕು ಇಲ್ಲವೇ ಮುರುಳೀಧರ ಹಾಲಪ್ಪ ಅವರಿಗೆ ಕೊಡಬೇಕು. ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಗೆಲ್ಲಿಸಿಕೊಂಡು ಬರಲು ತೀರ್ಮಾನಿಸಲಾಗಿದೆ. ಇದನ್ನು ಬಿಟ್ಟು ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಗುಪ್ತಸಭೆಯ ನಡುವೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ಮುರುಳೀಧರ ಹಾಲಪ್ಪ, ನಾವು ಲೋಕಸಭಾ ಕಾಂಗ್ರೆಸ್ ಆಭ್ಯರ್ಥಿಯನ್ನು ಗೆಲ್ಲಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆಯೇ ಹೊರತು ಮುದ್ದಹನುಮೇಗೌಡರ ವಿರುದ್ಧ ಸಭೆ ನಡೆಸಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ತುಮಕೂರು ಗ್ರಾಮಾಂತರದ ಎಲ್ಲಾ ಮುಖಂಡರು ಸೇರಿ ಮುಂದಿನ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಅದು ಬಿಟ್ಟು ಯಾರ ವಿರುದ್ಧವೂ ಸಭೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಂಸದ ಮುದ್ದಹನುಮೇಗೌಡ ಅವರು ಪಕ್ಷಕ್ಕೇ ಇನ್ನೂ ಸೇರ್ಪಡೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಟಿಕೆಟ್ ವಿಚಾರ ಯಾಕೆ ಬರುತ್ತೆ ಎಂದು ಪ್ರಶ್ನಿಸಿರುವ ಮುರುಳೀಧರ ಹಾಲಪ್ಪ, ನಾನು ಕೂಡ ತುಮಕೂರು ಲೋಕಸಭೆ ಚುನಾವಣೆಗೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್ ಕೊಡಬೇಕು ಎಂದು ಆಗ್ರಹ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಗೌರಿಶಂಕರ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆ ಗೆಲುವಿನ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಉದ್ದೇಶ. ಹಾಗಾಗಿ ಗ್ರಾಮಾಂತರ ಮುಖಂಡರೆಲ್ಲಾ ಸೇರಿ ತಂತ್ರಗಾಋಇಕೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಂಸದ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವ ವಿಚಾರ ಗೊತ್ತಿಲ್ಲ. ನಾನು ಕೂಡ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ ಎಂದು ಗುಪ್ತಸಭೆಯ ಬಳಿಕ ಮುದ್ದಹನುಮೇಗೌಡ ಅವರ ವಿರೋಧಿಗಳು ಉಲ್ಟಾ ಹೊಡೆದಿದ್ದಾರೆ.