Sunday, September 8, 2024
Google search engine
Homeಚಳುವಳಿತುಮಕೂರು - ಕೊಬ್ಬರಿಗೆ ಬಜೆಟ್ ನಲ್ಲಿ 3 ಸಾವಿರ ಪ್ರೋತ್ಸಾಹ ಧನ ಪ್ರಕಟಿಸಲು ರೈತರ ಒತ್ತಾಯ

ತುಮಕೂರು – ಕೊಬ್ಬರಿಗೆ ಬಜೆಟ್ ನಲ್ಲಿ 3 ಸಾವಿರ ಪ್ರೋತ್ಸಾಹ ಧನ ಪ್ರಕಟಿಸಲು ರೈತರ ಒತ್ತಾಯ

ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಲಿರುವ ಬಜೆಟ್‌ನಲ್ಲಿ ಕೊಬ್ಬರಿಗೆ 3 ಸಾವಿರ ರೂ ಪ್ರೋತ್ಸಾಹ ಧನ ಪ್ರಕಟಿಸುವ ಮೂಲಕ ನಾವು ರೈತರ ಪರ ಎಂಬುದನ್ನು ದಾಖಲೆಗಳ ಸಮೇತ ಸಾಬೀತುಪಡಿಸಬೇಕು ಎಂದು ರೈತ ಮುಖಂಡ ಕೆ.ಟಿ.ಶಾಂತಕುಮಾರ್ ಒತ್ತಾಯಿಸಿದರು.

ತುಮಕೂರು ನಗರದಲ್ಲಿ ಕೊಬ್ಬರಿಗೆ ಕ್ವಿಂಟಾಲ್‌ಗೆ 15 ಸಾವಿರ ಬೆಂಬಲ ಬೆಲೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರುವ ಆಯೋಜಿಸಿರುವ ತುಮಕೂರು ಬಂದ್ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರ ನೀಡುತ್ತಿರುವ 1500 ರೂಗಳಿಗೆ ಹೆಚ್ಚುವರಿಯಾಗಿ ಅಷ್ಟೇ ಹಣವನ್ನು ಪ್ರೋತ್ಸಾಹಧನವಾಗಿ ಘೋಷಿಸಿ ಸಂಕಷ್ಟದಲ್ಲಿರುವ 12 ಜಿಲ್ಲೆಗಳ ಕೊಬ್ಬರಿ ಬೆಳೆಗಾರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಕೇಂದ್ರದ ಅನುಮೋದನೆಯಂತೆ ರಾಜ್ಯ ಸರ್ಕಾರ ನ್ಯಾಫೆಡ್ ಮೂಲಕ ಖರೀದಿಸಲು ಹೊರಟಿದ್ದ ಕೊಬ್ಬರಿ ನೋಂದಣಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿ ವರ್ತಕರು, ದಲ್ಲಾಳಿಗಳು, ಸಾಗಾಟಗಾರರಿಂದ ಕೊಬ್ಬರಿ ಖರೀದಿಸಿ, ಕೇವಲ ನಾಲ್ಕು ದಿನದಲ್ಲಿ ನಿಗದಿಪಡಿಸಿದ 62,500 ಮೆಟ್ರಿಕ್ ಟನ್ ಖರೀದಿ ಮುಗಿದಿದೆ ಎಂದು ಹೇಳಿದ್ದಾರೆ. ಇದು ಶುದ್ದ ಸುಳ್ಳು, ರೈತರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ. ಹಾಗಾಗಿ 62,500 ಮೆಟ್ರಿಕ್ ಟನ್‌ಗೆ ಬದಲಾಗಿ 1.50 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ರಾಜ್ಯ ಸರ್ಕಾರ ಅನುಮೋದನೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನ್ಯಾಫೆಡ್‌ನ ಮೂಲಕ ಕೊಬ್ಬರಿ ಖರೀದಿಗೆ ನೊಂದಾಯಿಸುವ ವೇಳೆ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇದೆ. ಹಾಗಾಗಿ ಸರ್ಕಾರ ಕೂಡಲೇ ತನಿಖೆ ಕೈಗೊಂಡು, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಜೊತೆಗೆ, ಮತ್ತಷ್ಟು ಖರೀದಿಗೆ ರೈತರ ಹೆಸರು ನೊಂದಾಯಿಸಲು ಮುಂದಾಗಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ತುಮಕೂರು. ಆದರೆ ನೊಂದಣಿ ನೋಡಿದರೆ ಕಡಿಮೆ ಇದೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಎಂ.ಎಸ್.ಪಿ.ಗೆ ಕಾಯ್ದ ತರಬೇಕೆಂದು ಹೋರಾಟ ನಡೆಸುತ್ತಿರುವ ರೈತರ ಪರವಾಗಿ ಮಾತನಾಡುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ಗಾಂಧಿ ರಾಜ್ಯದಲ್ಲಿ ಮಾತ್ರ ಅತಿ ಕಡಿಮೆ ಬೆಲೆಗೆ ಕೊಬ್ಬರಿ ಖರೀದಿಸುತ್ತಿದ್ದರೂ ಇದುವರೆಗೂ ಮಾತನಾಡಿಲ್ಲ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕೊಬ್ಬರಿಗೆ ಸರಿಯಾದ ಬೆಂಬಲ ಬೆಲೆ ನೀಡದಿದ್ದರೆ ನೀರಾದಿಂದ ಸ್ಪಿರಿಟ್ ಉತ್ಪಾದನೆ ಮಾಡಲು ಮುಂದಾಗಬೇಕಾಗುತ್ತದೆ. ಈಗಾಗಲೇ ಶ್ರೀಲಂಕಾದಲ್ಲಿ ತೆಂಗಿನ ನೀರಾದಿಂದ ಅತ್ಯುತ್ತಮ ಸಾವಯವ ಸ್ಪಿರೀಟ್ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಅಲ್ಲಿನ ಸರ್ಕಾರವೂ ಮಾರಾಟಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಸಂಘ ಮತ್ತು ಹಸಿರುವ ಸೇನೆಯ ಜಿಲ್ಲಾಧ್ಯಕ್ಷ ಧನಂಜಯಾ ಆರಾಧ್ಯ, ಬಿ.ಎಸ್.ಪಿ.ಯ ರಾಜಸಿಂಹ, ಹನುಮಂತರಾಯಪ್ಪ, ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ. ಎಎಪಿಯ ಕರಿಗೌಡ, ರುಕ್ಸಾನ್‌ಭಾನು, ಮಧುಸೂಧನ್ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular