Friday, October 18, 2024
Google search engine
Homeಮುಖಪುಟಸಮಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಿ - ಚಿಂತಕ ಎಚ್.ಕೆ.ವಿವೇಕಾನಂದ

ಸಮಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಿ – ಚಿಂತಕ ಎಚ್.ಕೆ.ವಿವೇಕಾನಂದ

ಜಾತಿ, ಧರ್ಮ, ಪ್ರದೇಶದ ಹೆಸರಿನಲ್ಲಿ ಜನ ಸಮುದಾಯಗಳನ್ನು ವಿಭಜಿಸುವುದನ್ನು ನಿಲ್ಲಿಸಿ ಮಾನವೀಯ ನೆಲೆಗಟ್ಟಿನಲ್ಲಿ ಸಮಸಮಾಜವನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಾಮಾಜಿಕ ಚಿಂತಕ ಎಚ್.ಕೆ.ವಿವೇಕಾನಂದ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ರೆಡ್ಡಿ ಹಳ್ಳಿ ಗ್ರಾಮದ ರಾಧಾ-ಗಂಗಾಧರಯ್ಯ ಅವರ ಮನೆಯಲ್ಲಿ ಅರಿವು ಭಾರತ ಸಂಸ್ಥೆ ಹಮ್ಮಿಕೊಂಡಿದ್ದ ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತಾ ಆಚರಣೆಗಳನ್ನು ಕೊನೆಗಾಣಿಸದೆ ಸಮಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ನಮ್ಮಂತೆ ಅವರು ಕೂಡ ಮನುಷ್ಯರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.

ಕರ್ನಾಟಕ ಸರ್ಕಾರ ಸಮಸಮಾಜ ನಿರ್ಮಾಣದ ಆಶಯದಿಂದ 12ನೇ ಶತಮಾನದ ಮಹಾದಾರ್ಶನಿಕ ವಚನಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ೆಂದು ಅಧಿಕೃತವಾಗಿ ಘೋಷಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಅರಿವು ಭಾರತ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪನ್ಯಾಸಕ ಅರಿವು ಶಿವಪ್ಪ ಮಾತನಾಡಿ, ಅರಿವು ಭಾರತ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಜಾತಿಮುಕ್ತ, ಅಸ್ಪೃಶ್ಯತೆಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಸಲುವಾಗಿ ಕರ್ನಾಟಕ ರಾಜ್ಯಾದ್ಯಂತ ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಎಂಬ ಘೋಷಣೆಯೊಂದಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಸವರ್ಣೀಯರ ಮನೆಗೆ ಶೋಷಿತ ಅಸ್ಪೃಶ್ಯ ಸಮುದಾಯವನ್ನು ಪ್ರೀತಿ ಮತ್ತು ಆತ್ಮೀಐತೆಯಿಂದ ಆಹ್ವಾನಿಸಿ ಅವರೊಂದಿಗೆ ಆಹಾರ ಸೇವಿಸಿ ಚಹ ಕುಡಿಯುವುದರ ಜೊತೆಗೆ ಸವರ್ಣೀಯರ ಜೊತೆಗೆ ಅಸ್ಪೃಶ್ಯ ಕಾಲೋನಿಗಳಿಗೆ ಭೇಟಿ ನೀಡಿದ್ದಲ್ಲದೇ ಅಲ್ಲಿನ ಜನರಲ್ಲಿ ಸಮಸಮಾಜ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಿ ದೇವಾಲಯಗಳ ಪ್ರವೇಶ, ಮನೆ ಪ್ರವೇಶ ಸೇರಿ ಹಲವು ಬದಲಾವಣೆ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದಗಂಗಯ್ಯ ಹೊಲತಾಳು ಮಾತನಾಡಿ, ಅಸ್ಪೃಶ್ಯತೆ ಕಡಿಮೆಯಾದಂತೆ ಕಂಡರೂ ಅದು ಗ್ರಾಮೀಣ ಭಾಗದಲ್ಲಿ ದಟ್ಟವಾಗಿ ಕಾಣಬಹುದಾಗಿದೆ. ಅದನ್ನು ಹೋಗಲಾಡಿಸಲು ಹೊಸ ಬಗೆಯ ಆಲೋಚನೆಗಳು ಬೇಕು ಎಂದು ವಿವರಿಸಿದರು.

ರೈತ ಸಂಘದ ಮುಖಂಡರ ಅಬ್ಬಣ್ಣಿ ಶಿವಪ್ಪ ಮಾತನಾಡಿ, ಹಲವು ಮಹನೀಯರ ಆಶಯಗಳನ್ನು ಮುನ್ನೆಲೆಗೆ ತಂದು ಸಮಸಮಾಜದ ಕನಸನ್ನು ಸಾಕಾರಗೊಳಿಸಬೇಕಾಗಿದೆ ಎಂದು ತಿಳಿಸಿದರು.

ಕನ್ನಡ ಉಪನ್ಯಾಸಕ ಎ.ರಾಮಚಂದ್ರಪ್ಪ ಮಾತನಾಡಿ, ನಮ್ಮ ನಡೆ ನುಡಿಗಳ ವ್ಯತ್ಯಾಸ ಹೋಗುವುದರ ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಮಾಪುರ ಶ್ರೀರಂಗಾಚಾರ್ಯ ಮಾತನಾಡಿ, ಅಸ್ಪೃಶ್ಯತೆಯನ್ನು ವಿರೋಧಿಸಿದ ಕಾರಣ ನಾನು ನಮ್ಮ ಮನೆಯಿಂದಲೇ ಬಹಿಷ್ಕಾರಕ್ಕೆ ಒಳಗಾಗಿದ್ದೆ ಎಂದರು.

ದಲಿತ ಮುಖಂಡರಾದ ಜೀವಿಕ ಸಂಜೀವಮೂರ್ತಿ, ರೆಡ್ಡಿಹಳ್ಳಿ ನರಸಿಂಹಮೂರ್ತಿ, ಆನಂದಕುಮಾರ್, ನಾರಾಯಣಪ್ಪ, ದೇವರಾಜು, ಸುದ್ದೇಕುಂಟೆ ನಾಗರಾಜು, ಹನುಮಂತರಾಯಪ್ಪ, ಪುಟ್ಟರಾಜು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.

ಇದೇ ವೇಳೆ ಅರಿವು ಭಾರತ ಸಂಸ್ಥೆ ವತಿಯಿಂದ ಅನುರಾಧ-ಗಂಗಾಧರ್ ದಂಪತಿಗೆ ಗ್ರಾಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular