ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಾನೂ ಕೂಡ ಅಭ್ಯರ್ಥಿ ಆಕಾಂಕ್ಷಿ ಎಂದು ಬಿಜೆಪಿ ವರಿಷ್ಠರಿಗೆ ಹೇಳಿದ್ದೇನೆ. ನಿರ್ಣಯ ಮಾಡಬೇಕಾದವರು ಪಕ್ಷದ ವರಿಷ್ಟರು. ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ಎಂಬುದನ್ನು ಕಾದು ನೋಡುತ್ತಿದ್ದೇನೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮಣ್ಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ, ಹಾಸನ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದರು. ರಾಜ್ಯಾದ್ಯಂತ ಓಡಾಡುತ್ತಿದ್ದರು. ಅವರಷ್ಟು ಕ್ರಿಯಾಶೀಲರಾಗಿ ಓಡಾಡಲು ನಮಗೆ ಶಕ್ತಿ ಇಲ್ಲ ಎಂದು ವ್ಯಂಗ್ಯವಾಡಿದರು.
ನಾನು ಕೂಡ ತುಮಕೂರಿನಿಂದ ಸ್ಪರ್ಧಿಸಲು ಸಿದ್ದನಿದ್ದೇನೆ. ನಾನು ಯಾವುದರಲ್ಲಿ ಕಡಿಮೆ ಇದ್ದೇನೆ ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಹೈಕಮಾಂಡ್ ಗೂ ನಾನು ಸ್ಪರ್ಧಿಸುವುದನ್ನು ತಿಳಿಸಿದ್ದೇನೆ. ಏನು ತೀರ್ಮಾನ ಮಾಡುತ್ತಾರೋ ಕಾದು ನೋಡುತ್ತಿದ್ದೇನೆ ಎಂದರು.
ಕ್ಷೇತ್ರದಲ್ಲಿ ಯಾರು ಬೇಕಾದರೂ ಓಡಾಡಬಹುದು. ಅದಕ್ಕೆ ಆಭ್ಯಂತರವಿಲ್ಲ. ಸೋಮಣ್ಣ ಸ್ಪರ್ಧಿಸುವ ಕುರಿತು ನಾನು ಈಗ ಏನನ್ನೂ ಹೇಳುವುದಿಲ್ಲ. ಬಿಜೆಪಿಯಲ್ಲಿ ಅಷ್ಟು ಸುಲಭವಾಗಿ ಏನೂ ಆಗುವುದಿಲ್ಲ. ಆದಷ್ಟು ಮಾನದಂಡಗಳಿಂದ ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಪಾರ್ಲಿಮೆಂಟ್ ಗೆ ಆಯ್ಕೆ ಮಾಡುತ್ತಾರೆ. ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಮೇಲೆ ನಾನು ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ತುಮಕೂರು ಲೋಕಸಭಾ ಕ್ಷೇತ್ರ ಬಿಜೆಪಿಗೆ ಸೇರಿದ್ದು, ನಾವು ನಮಗೆ ಎಂದು ತಿಳಿದುಕೊಂಡಿದ್ದೇವೆ. ಕಳೆದ ಬಾರಿ ಕಠಿಣ ಸ್ಪರ್ಧೆ ಇದ್ದಾಗಲೇ ಗೆಲುವು ಸಾಧಿಸಿದ್ದೇವೆ. ಈಗ ನಮ್ಮನ್ನು ಕೈಬಿಡುತ್ತಾರೆಯೇ ಎಂಬುದನ್ನು ಮಾತನಾಡಲು ನಾವು ಯಾರು ಎಂದು ಅವರು ಪ್ರಶ್ನಿಸಿದರು.
ಮೈತ್ರಿ ಬೇಡ ಅಂತ ನಾನು ಹೇಳುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಮೈತ್ರಿ ಆಗಿದೆ. ಹಾಗಾಗಿ ಬೇಕು. ಪ್ರಯೋಜನ ತೆಗೆದುಕೊಳ್ಳಲು ಮತ್ತು ನಮ್ಮ ಶಕ್ತಿ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ತುಮಕೂರು ಲೋಕಸಭಾ ಕ್ಷೇತ್ರ ನಮಗೆ ಎಂದು ಎಚ್ಚರ ತಪ್ಪದಂತೆ ಇರಬೇಕು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವುದನ್ನು ತಳ್ಳಿ ಹಾಕಲು ಬರುವುದಿಲ್ಲ ಎಂದು ಹೇಳಿದರು.
ನಾನು ಸ್ಪರ್ಧಿಸುತ್ತೇನೆ. ನಾನು ಆಕಾಂಕ್ಷಿ ಎಂದು ಪ್ರಬಲವಾಗಿ ಸಮರ್ಥಿಸಿಕೊಂಡರು. ತುಮಕೂರಿನಿಂದ ಕೋದಂಡರಾಮಯ್ಯ ಸ್ಪರ್ಧೆ ಮಾಡಿದಾಗಲೂ ಸಿದ್ದರಾಮಯ್ಯಗೆ ಹೇಳಿದ್ದೆವು. ಅವರು ಗೆಲ್ಲುವುದಿಲ್ಲ ಎಂದು. ಮಾಜಿ ಪ್ರಧಾನಿ ದೇವೇಗೌಡ ಸ್ಪರ್ಧಿಸಿದಾಗಲು ನಾವು ಅದನ್ನೇ ಪ್ರಚಾರ ಮಾಡಿದೆವು. ಅವರು ಸೋತರು. ಯಾರು ಯಾರು ಹೊರಗಿನಿಂದ ಬಂದರೋ ಅವರ್ಯಾರು ಸಫಲರಾಗಿಲ್ಲ. ಹೀಗಂದ ಮೇಲೆ ಮುಂದೆ ಬರುವವರು ಗೆಲ್ಲೋಲ್ಲ ಅಂಥ ಅರ್ಥವಲ್ಲ ಎಂದು ತಿಳಿಸಿದರು.