ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕರಿಗೂ ಬಿಜೆಪಿ ನಾಯಕರಿಗೂ ಅತ್ಯುತ್ತಮ ಒಡನಾಟವಿದ್ದು, ಈ ಅಕ್ರಮದಲ್ಲಿ ಬಿಜೆಪಿ ನಾಯಕರ ಪಾಲೆಷ್ಟು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವಿಶ್ವ ವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನಿನ ನಕಲಿ ಉತ್ಪನ್ನಗಳ ಮಾರಾಟದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗಿದೆ. ಜನವರಿ ಮೊದಲ ವಾರದಲ್ಲಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ಅನಾಮಿಕ ಕರೆ ಬರುತ್ತದೆ. ಅದರಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುತ್ತದೆ. ಕೂಡಲೇ ಸಚಿವರು ಕೆಎಸ್ ಡಿಎಲ್ ಎಂಡಿ ಪ್ರಶಾಂತ್ ಅವ್ರಿಗೆ ಮಾಹಿತಿ ನೀಡುತ್ತಾರೆ ಎಂದರು.
ನಂತರ ಈ ಜಾಲದ ಹುಡುಕಾಟ ನಡೆಯುತ್ತದೆ. ಇದು ಹೈದರಾಬಾದ್ ನಲ್ಲಿದೆ ಎಂದು ತಿಳಿಯುತ್ತದೆ. ಇದನ್ನು ತಡೆಗಟ್ಟಲು ಕೆಲವು ಅಧಿಕಾರಿಗಳು ಹೋಗಿ 25 ಲಕ್ಷದ ಆರ್ಡರ್ ನೀಡುತ್ತಾರೆ. ಅವರು ಇದನ್ನು ಪೂರೈಸುವುದಾಗಿ ಒಪ್ಪಿಕೊಳ್ಳುತ್ತಾರೆ. ಇದು ದೊಡ್ಡ ಮಟ್ಟದ ಆರ್ಡರ್ ಆಗಿರುವುದರಿಂದ ನಿಮ್ಮ ಕಾರ್ಖಾನೆಗೆ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಅವರು ಒಪ್ಪುತ್ತಾರೆ. ಈ ನಕಲಿ ಉತ್ಪಾದನಾ ಕಾರ್ಖಾನೆ ವಿಳಾಸ ತಿಳಿದ ತಕ್ಷಣ ಅಲ್ಲಿ ದಾಳಿ ಮಾಡಿ ಅದನ್ನು ಸೂಜ್ ಮಾಡಲಾಗುತ್ತದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಸೇಲ್ಸ್ ಮ್ಯಾನೇಜರ್ ಈ ವಿಚಾರವಾಗಿ ಪ್ರಕರಣ ದಾಖಲಿಸುತ್ತಾರೆ ಎಂದು ಹೇಳಿದರು.
ಈ ಪ್ರಕರಣದ ಎಫ್ಐಆರ್ ಪ್ರಕಾರ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗುತ್ತದೆ. ಇವರಿಬ್ಬರೂ ಪೊಲೀಸರ ವಶದಲ್ಲಿದ್ದಾರೆ. ಈ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹೊರಬಂದ ಅಚ್ಚರಿ ಹಾಗೂ ಮುಖ್ಯ ಸಂಗತಿ ಎಂದರೆ ಈ ಇಬ್ಬರು ವ್ಯಕ್ತಿಗಳು ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಇವರು ಯೋಗಿ ಆದಿತ್ಯನಾಥ್ ತೆಲಂಗಾಣ ಶಾಸಕ ರಾಜಾ ಸಿಂಗ್ ಅವರ ಒಡನಾಡಿಗಳಿದ್ದಾರೆ. ಇಷ್ಟೇಲ್ಲಾ ಒಡನಾಟ ಇಟ್ಟುಕೊಂಡಿರುವವರ ಜತೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಹೊಂದಿರುವುದಿಲ್ಲವೇ? ಎಂದು ಪ್ರಶ್ನಿಸಿದರು.
ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಈ ಕಾರ್ಯಾಚರಣೆ ಮಾಡಿದ್ದು ರಾಜ್ಯದ ಆಸ್ತಿ ಉಳಿಸಿಕೊಳ್ಳಲು ಎಂದು ತಿಳಿಸಿದರು.
ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಪ್ಯಾರೀಸ್ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿ ಪ್ರತಿ ದೇಶ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಅವಕಾಶವಿರುತ್ತದೆ. ಅಲ್ಲಿನ ಜನ ಮೈಸೂರ್ ಸ್ಯಾಂಡಲ್ ಸೋಪನ್ನು ಪ್ಯಾರೀಸ್ ನಲ್ಲಿ ಮಾರಾಟ ಮಾಡುವುದಿಲ್ಲ ಯಾಕೆ ಎಂದು ಕೇಳಿದ್ದರು. ನಮ್ಮ ರಾಜ್ಯದ ಉತ್ಪನ್ನ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಂತಹ ಉತ್ಪನ್ನಗಳನ್ನು ಬಿಜೆಪಿ ನಾಯಕರು ನಕಲಿ ಉತ್ಪನ್ನಗಳ ಮಾರಾಟಕ್ಕೆ ಶಾಮೀಲಾಗಿದ್ದಾರೆ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಈಗ ಕರ್ನಾಟಕದ ಆಸ್ತಿ ಮಾರಲು ತಯಾರಾಗಿದ್ದಾರೆ ಎಂದು ಆಪಾದಿಸಿದರು.
ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ್, ಫೈಟರ್ ರವಿ, ಪೃಥ್ವಿ ಸಿಂಗ್ ರಂತಹವರು ಬಿಜೆಪಿಯಲ್ಲೇ ಕಾಣಿಸಿಕೊಳ್ಳುತ್ತಿರುವುದೇಕೆ? ರಾಜ್ಯದ ಆಸ್ತಿ ಮಾರಲು ಹೊರಟವರಿಗೆ ಪಕ್ಷದ ಟಿಕೆಟ್ ನೀಡಿ, ಪದಾಧಿಕಾರಿ ಮಾಡುತ್ತೀರಾ? ನಿಮಗೆ ನಾಚಿಕೆ ಇದ್ದರೆ ಅವರನ್ನು ವಜಾ ಮಾಡುತ್ತಿದ್ದಿರಿ ಎಂದು ಹೇಳಿದರು.