ನ್ಯಾಯಾಂಗ ವ್ಯವಸ್ಥೆಯನ್ನು ಬದಿಗೊತ್ತಿ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ರಕ್ಷಣೆಗೆ ಮುಂದಾಗಿದ್ದ ಗುಜರಾತ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗೆಯೇ ಗುಜರಾತ್ ಸರ್ಕಾರದ ಜತೆ ಕೈಜೋಡಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು. ಈ ಪ್ರಕರಣದಲ್ಲಿ ಮೌನವಹಿಸಿರುವ ಪ್ರಧಾನಮಂತ್ರಿಗಳು ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಗುಜರಾತ್ ಸರ್ಕಾರದ ಈ ನಡೆಯನ್ನು ಸುಪ್ರೀಂ ಕೋರ್ಟ್ ಟೀಕಿಸಿ, ಬಿಡುಗಡೆಯಾಗಿದ್ದ ಅಪರಾಧಿಗಳ ಬಂಧನಕ್ಕೆ ಆದೇಶ ನೀಡಿದೆ. ಆ ಮೂಲಕ ಗುಜರಾತ್ ಬಿಜೆಪಿ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಗಳು ಹಾಗೂ ದೇಶದ ಗೃಹ ಸಚಿವರು ಗುಜರಾತಿನವರೇ ಆಗಿದ್ದು ಇವರ ಅಣತಿ ಇಲ್ಲದೆ ಗುಜರಾತ್ ರಾಜ್ಯದಲ್ಲಿ ಯಾವುದೇ ನಿರ್ಧಾರ ಸಾಧ್ಯವಿಲ್ಲ. ಇಂತಹ ಹೀನಕೃತ್ಯ ಮಾಡಿದವರನ್ನು ಬಿಡುಗಡೆ ಮಾಡಿರುವುದನ್ನು ನೋಡಿದರೆ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಈ ವಿಚಾರದಲ್ಲಿ ಅಪರಾಧಿಗಳ ಜತೆ ಶಾಮೀಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟಾದರೂ ಅವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಗುಜರಾತಿನಲ್ಲಿ ನ್ಯಾಯಾಂಗ ವ್ಯವಸ್ಥೆ ನಾಶವಾಗಿದ್ದು, ಅವರ ಇಷ್ಟಾನುಸಾರ ಕಾನೂನನ್ನು ತಮ್ಮ ಕೈಗೆತೆಗೆದುಕೊಳ್ಳುತ್ತಿದ್ದಾರೆ.
ಈ ಅಪರಾಧಿಗಳ ರಕ್ಷಣೆಗೆ ಮುಂದಾಗಿರುವ ಗುಜರಾತ್ ಸರ್ಕಾರವನ್ನು ವಜಾಗೊಳಿಸಲು ಕೇಂದ್ರ ಸರ್ಕಾರ ಹಾಗೂ ಗುಜರಾತ್ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು. ಈ ಶಿಫಾರಸ್ಸನ್ನು ರಾಷ್ಟ್ರಪತಿಗಳು ಅನುಮೋದಿಸಿ ಗುಜರಾತ್ ಸರ್ಕಾರವನ್ನು ವಜಾಗೊಳಿಸಬೇಕು. ಗಾಂಧಿ ಹುಟ್ಟಿದ ಪುಣ್ಯಭೂಮಿಯಲ್ಲಿ ಇಂತಹ ದುರ್ಘಟನೆ ನಡೆದರೆ ಇದರ ಅಪರಾಧಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಕ್ಷಣೆ ಮಾಡಿರುವುದು ಖಂಡನೀಯ ಎಂದು ತಿಳಿಸಿದರು.