ಅತಿಥಿ ಉಪನ್ಯಾಸಕರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗೆಳ ಜೊತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, 40 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಅತಿಥಿ ಉಪನ್ಯಾಸಕರ ಹಿಂಪಡೆದಿದ್ದಾರೆ. ಗೌರವಧನ ಹೆಚ್ಚಳ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರಿಂದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಅತಿಥಿ ಉಪನ್ಯಾಸಕರ ಸಂಘಗಳು ತಿಳಿಸಿವೆ.
ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಟು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಘ ತಿಳಿಸಿದೆ.


