Thursday, November 21, 2024
Google search engine
Homeಮುಖಪುಟಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳದ ಜೊತೆ ಹಲವು ಬೇಡಿಕೆಗಳ ಈಡೇರಿಕೆಗೆ ಮಹತ್ವದ ನಿರ್ಣಯ

ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳದ ಜೊತೆ ಹಲವು ಬೇಡಿಕೆಗಳ ಈಡೇರಿಕೆಗೆ ಮಹತ್ವದ ನಿರ್ಣಯ

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು‌ ಮಾಜಿ MLC ಪುಟ್ಟಣ್ಣನವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಚರ್ಚಿಸಿ, ಅತಿಥಿ ಉಪನ್ಯಾಸಕರ ನೆರವಿಗೆ ನಿಲ್ಲುವ ಉದ್ದೇಶದಿಂದ ಹಲವು ಮಹತ್ವದ ನಿರ್ಣಯಗಳನ್ನು ನಮ್ಮ‌ ಸರ್ಕಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದ್ದೇವೆ. ಅವರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡುವ ಜೊತೆಗೆ ಕೆಲವು ಹೊಸ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ನಾನು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದೆ. ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ಗೌರವಧನ ಹೆಚ್ಚಳಕ್ಕೆ ಮುಂದಾಗಿದೆ ಎಂದು ಹೇಳಿದ್ದಾರೆ.

ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ ಎಂದು ಅಭಯ ನೀಡಿದ್ದಾರೆ.

ಇದರ ಜೊತೆ ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಟು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾನುಭವ ಆಧರಿಸಿ, ವೆಯ್ಟೇಜ್‌ ನೀಡುವುದು, ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಕಾರ್ಯಭಾರವಿದ್ದಲ್ಲಿ ನಂತರದ ವರ್ಷವೂ ಅಲ್ಲಿಯೇ ಅವರ ಸೇವೆಯನ್ನು ಮುಂದುವರೆಸುವುದು ಸೇರಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಸರಳೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ಇದೆ, ಕೂಡಲೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular