ಪ್ರಜಾಪ್ರಭುತ್ವ ಇಂದು ಅತ್ಯಂತ ಬಿಕ್ಕಟ್ಟು ಎದುರಿಸುತ್ತಿದೆ. ಜವಾಬ್ದಾರಿ ಮರೆತಿರುವ ಸಾಹಿತಿಗಳು ಮೌನಕ್ಕೆ ಶರಣಾಗಿದ್ದು ಅವರು ಏನೇ ಬರೆದರೂ ಅದು ಬೂಸಾ ಸಾಹಿತ್ಯವಾಗಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನಮನೆಯಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಾಹಿತಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದು ಈ ಬಗ್ಗೆ ಎಲ್ಲಾ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಶಾಂತಿಯ ಕಾಲದಲ್ಲಿ ಕ್ರಾಂತಿಯ ಮಾತುಗಳನ್ನಾಡುವುದು ಸಾಹಿತ್ಯವಲ್ಲ. ನಿಜವಾಗಿಯೂ ಕ್ರಾಂತಿಯ ಕಾಲದಲ್ಲಿ ಮೌನಕ್ಕೆ ಶರಣಾಗುವುದು ಸಲ್ಲದು. ಪ್ರಜಾಪ್ರಭುತ್ವಕ್ಕೆ ದೊಡ್ಡ ಆತಂಕ ಎದುರಾಗಿರುವ ಈ ಕಾಲದಲ್ಲಿ ಸಾಹಿತಿಗಳು ಬರೆದಂತೆ ಬದುಕಬೇಕಾಗಿದೆ. ಸಾಹಿತ್ಯ ಸಮ್ಮೇಳನಗಳು ಇಂತಹ ಪ್ರಜ್ಞೆಯನ್ನು ಮೂಡಿಸಬೇಕಿದೆ ಎಂದು ಹೇಳಿದರು.
ರಾಜಪ್ರಭುತ್ವದ ಕಾಲದಲ್ಲಿಯೂ ಪ್ರಜಾಪ್ರಭುತ್ವದ ಆಶಯಗಳನ್ನು ಜಾರಿ ಮಾಡಿ, ಸಾಹಿತ್ಯ ಪರಿಷತ್ ಕಟ್ಟಿ, ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯ ಈಡೇರಬೇಕೆಂದರೆ, ಸಾಹಿತ್ಯ ಆಸ್ಥಾನಗಳಲ್ಲಿ ಪುಂಗಿ ಊದುವ ಬದಲು, ಜನಸಾಮಾನ್ಯರ ಹೃದಯದಲ್ಲಿ ಮನೆ ಮಾಡುವಂತಹ ಕೆಲಸ ಆಗಬೇಕಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಇಂತಹ ವೇದಿಕೆಗಳು ಬಳಕೆಯಾಗಲಿ ಎಂದು ತಿಳಿಸಿದರು.
ತುಮಕೂರು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಜಾಗತೀಕರಣದ ಫಲವಾಗಿ ಇಡೀ ವಿಶ್ವವೇ ಒಂದು ಮಾರುಕಟ್ಟೆಯಾಗಿ ರೂಪಗೊಂಡಿದೆ. ಲಾಭವೇ ಮುಖ್ಯವಾಗಿರುವ ಇಂದಿನ ದಿನಮಾನದಲ್ಲಿ ಪ್ರಾದೇಶಿಕತೆ ಎಂಬುದು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿಯೇ ಜಾಗತೀಕರಣ ವಿಸ್ತರಣೆಗೊಳ್ಳುತ್ತಿದ್ದು, ಸರ್ವಾಧಿಕಾರಿ ಧೋರಣೆಗಳು, ಬಹುರಾಷ್ಟ್ರೀಯ ದಬ್ಬಾಳಿಕೆಯಿಂದ ಅದಿಮ ಸಂಸ್ಕೃತಿ, ಸ್ಥಳೀಯ ಭಾಷೆಗಳಿಗೆ ಕುತ್ತುಂಟಾಗಿದೆ. ಜೀವಪರವಾದ ಸಾಂಸ್ಕೃತಿಕ, ಕಲೆ, ಸಂಸ್ಕೃತಿ, ಸಾಹಿತ್ಯಗಳು ನಗಣ್ಯವಾಗುತ್ತಿವೆ ಎಂದರು.
ಇಂಗ್ಲಿಷ್ ಕಲಿಕೆಯ ಜೊತೆಗೆ, ನಮ್ಮ ಕನ್ನಡ ಉಳಿಸುವ ಛಲ ನಮಗೆ ಬೇಕಿದೆ. ಕನ್ನಡ ಅಳಿಯದಂತೆ ನೋಡಿಕೊಳ್ಳುವ ಶೈಕ್ಷಣಿಕ ಮತ್ತು ಶಾಸನಾತ್ಮಕ ಪ್ರಯತ್ನಗಳನ್ನು ನಿರಂತರವಾಗಿ ನಡೆಸಬೇಕಾಗಿದೆ. ಸಾಮೂಹಿಕವಾಗಿ ನಮ್ಮತನವನ್ನು ಕಳೆದುಕೊಳ್ಳದೆ, ವಿಕಾಸ ಹೊಂದುವ ಸಂಕಲ್ಪಶಕ್ತಿಯನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.