ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದು ಸಾಧ್ಯವಿಲ್ಲ. ಆದರೆ ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ, ನಿವೃತ್ತಿ ನಂತರ ಇಡಗಂಟು ಹಣ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಅತಿಥಿ ಉಪನ್ಯಾಸಕರು ಧರಣಿ ವಾಪಸ್ ಪಡೆಯದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಯುಜಿಸಿ ನಿಯಮಾವಳಿಗಳ ಪ್ರಕಾರ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಬರುವುದಿಲ್ಲ. ಹಾಗೆಯೇ ಅತಿಥಿ ಉಪನ್ಯಾಸಕರ ಹುದ್ದೆಗೆ ಸಮಾನಾಂತರವಾಗಿ ಗುಮಾಸ್ತರ ಹುದ್ದೆಯನ್ನು ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಲ್ಕು ಹಂತಗಳಲ್ಲಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಮೊದಲ ಬಾರಿಗೆ ಅತಿಥಿ ಉಪನ್ಯಾಸಕರಾಗಿ ಸೇರ್ಪಡೆಯಾಗುವವರಿಗೆ 26 ಸಾವಿರ ರೂ, ಐದು ವರ್ಷ ಪೂರೈಸಿದವರಿಗೆ 28 ಸಾವಿರ, ಸ್ಲೆಟ್ ಆದ ಉಪನ್ಯಾಸಕರಿಗೆ 30 ಸಾವಿರ ರೂ ಹಾಗೂ ಪಿಎಚ್.ಡಿ ಮತ್ತು ಐದು ವರ್ಷಕ್ಕೂ ಹೆಚ್ಚಿನ ಸೇವೆ ಸಲ್ಲಿಸಿವರಿಗೆ 32 ಸಾವಿರ ರೂಪಾಯಿ ಗೌರವಧನವನ್ನು ನೀಡಲಾಗುತ್ತಿದೆ.
ಹೀಗಾಗಿ ನಾಲ್ಕು ಹಂತದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ 5 ಸಾವಿರ ರೂಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು, ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಕ್ರಮವಾಗಿ 26 ಸಾವಿರ ವೇತನ ಪಡೆಯುತ್ತಿರುವ ಅತಿಥಿ ಉಪನ್ಯಾಸಕರು 31 ಸಾವಿರ, 28 ಸಾವಿರ ವೇತನ ಪಡೆಯುತ್ತಿರುವ ಉಪನ್ಯಾಸಕರಿಗೆ 33 ಸಾವಿರ, 30 ಸಾವಿರ ಪಡೆಯುತ್ತಿರುವವರಿಗೆ 35 ಸಾವಿರ ಹಾಗೂ 32 ಸಾವಿರ ರೂ ಪಡೆಯುತ್ತಿರುವವರಿಗೆ 37 ಸಾವಿರ ರೂಗಳಿಗೆ ವೇತನವನ್ನು ಹೆಚ್ಚಿಸಲು ತೀರ್ಮಾನವಾಗಿದೆ ಎಂದು ಸಚಿವರು ತಿಳಿಸಿದರು.
ಅತಿಥಿ ಉಪನ್ಯಾಸರಿಗೆ ಸೇವಾ ಭದ್ರತೆಯನ್ನು ಒದಗಿಸುವ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಮಾಡಿಸಲಾಗುವುದು. ಇದಕ್ಕೆ ಅತಿಥಿ ಉಪನ್ಯಾಸಕರು ಪ್ರತಿ ತಿಂಗಳು 400 ರೂ ಕಟ್ಟಿದರೆ, ಸರ್ಕಾರ 400 ರೂ ಕೊಡಲಿದೆ. ಇದರಿಂದ ಗರಿಷ್ಟ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆಯ ಹಣ ದೊರೆಯಲಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರು ನಿವೃತ್ತರಾದರೆ ಅಂಥವರಿಗೆ ನಿವೃತ್ತಿಯ ಬಳಿಕ 5 ಲಕ್ಷ ರೂಪಾಯಿ ಇಡುಗಂಟು ನೀಡಲಾಗುವುದು. ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರು ಅತಿಥಿ ಉಪನ್ಯಾಸಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಬಂದಿದ್ದು ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳು ಪ್ರಾಂಶುಪಾಲಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.