ಭಾರತಕ್ಕೊಂದು ಸ್ಪಷ್ಟವಾದ ಭಾಷಾ ನೀತಿ ಇಲ್ಲದಿರುವುದು ಮತ್ತು ಇವತ್ತಿನ ಕೇಂದ್ರ ಸರಕಾರವು ಭಾರತೀಯ ಭಾಷೆಗಳೊಡನೆ ಚೆಲ್ಲಾಟ ಆಡುತ್ತಾ ಹಿಂದಿಯನ್ನು ಎಲ್ಲರ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಹೇರುತ್ತಿರುವುದರ ಹಿನ್ನೆಲೆಯಲ್ಲಿ ಇದೇ ದಶಂಬರ 23ರಂದು ಕಲ್ಲಿಕೋಟೆಯಲ್ಲಿ ದಕ್ಷಿಣ ಭಾರತದ ಭಾಷೆಗಳ ಕುರಿತಾದ ಸಮಾವೇಶವನ್ನು ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿದ ನಾಲ್ಕು ದ್ರಾವಿಡ ಭಾಷೆಗಳು ಮತ್ತು ಸೇರದ ಸುಮಾರು 34 ಮುಖ್ಯ ಭಾಷೆಗಳ ಕುರಿತು ಪ್ರಧಾನವಾಗಿ ಚರ್ಚಿಸಲಾಗುವುದು.
ಕೇಂದ್ರ ಸರಕಾರವು 2021ರ ಭಾಷಾ ಗಣತಿಯನ್ನು (ಜನಗಣತಿಯ ಜೊತೆಗೆ) ಇನ್ನೂ ನಡೆಸಿಲ್ಲ. ಯಾವಾಗ ನಡೆಸುತ್ತದೋ ಅದೂ ಗೊತ್ತಿಲ್ಲ. 2030ರ ತನಕ ನಮಗೆ ಹೊಸ ಅಂಕಿ ಅಂಶಗಳು ಸಿಗುವ ಸಾಧ್ಯತೆಗಳು ಕಡಿಮೆ ಇರುವುದರಿಂದ 2011ರ ಅಂಕಿ ಅಂಶಗಳನ್ನು ಆಧರಿಸುವುದು ಅನಿವಾರ್ಯ. ಸ್ವಾತಂತ್ರ್ರ್ಯೋತ್ತರ ಭಾರತದಲ್ಲಿ ಮೊದಲ ಬಾರಿಗೆ ಹೀಗಾಗಿರುವುದರಿಂದ ಭಾಷಾ ವಿಷಯಕವಾಗಿ ನಾವು ಏನಿಲ್ಲವೆಂದರೂ ಎರಡು ದಶಕಗಳ ಕಾಲ ಹಿಂದಿದ್ದೇವೆ. ಈ ನಡುವೆ ಕೆಲವು ಅಂಶಗಳು ಆಸಕ್ತರ ಗಮನಕ್ಕೆ –
1. ಹಿಂದಿಯು ಗೃಹ ಇಲಾಖೆಯ ಅಡಿಯಲ್ಲಿ ಬರುತ್ತದೆ. ಹಿಂದಿ ಅಭಿವೃದ್ಧಿ ಸಮಿತಿಯ ಶಿಫಾರಸುಗಳು ಚರ್ಚೆಗಾಗಿ ಸಂಸತ್ತಿಗೆ ಹೋಗುವುದಿಲ್ಲ. ನೇರವಾಗಿ ರಾಷ್ಟ್ರಪತಿಗಳಿಗೆ ಹೋಗಿ, ಅಲ್ಲಿ ಅವರ ಅಂಕಿತ ಬಿದ್ದರೆ ಅವು ಕಾನೂನು ಆಗುತ್ತವೆ. ಮತ್ತೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲೂ ಆಗುವುದಿಲ್ಲ. ಉಳಿದ ಭಾಷೆಗಳು ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು ಅವುಗಳಿಗೆ ಅಂಥ ಕಾನೂನಿನ ಬೆಂಬಲವೇ ಇಲ್ಲ. ಬದಲಾದ ಇವತ್ತಿನ ಸಂದರ್ಭದಲ್ಲಿ ಎಲ್ಲ ಭಾಷೆಗಳೂ ಒಂದೇ ಮಂತ್ರಾಲಯದ ಅಡಿಯಲ್ಲಿ ಬರುವುದು ಸಾಧ್ಯವೇ?
2. ಎಂಟನೇ ಶೆಡ್ಯೂಲಿಗೆ ಸೇರಿಸಲು ಒಟ್ಟು 99 ಭಾಷೆಗಳು ಮನವಿ ಸಲ್ಲಿಸಿವೆ. ಈ ಕುರಿತು ಕೇಂದ್ರ ಸರಕಾರ ತನ್ನ ನಿಲುವನ್ನು ಯಾಕೆ ಪ್ಕಟಿಸುತ್ತಿಲ್ಲ.
3. UNESCO ಪ್ರಕಾರ, ಮುಂದಿನ 100 ವರ್ಷಗಳಲ್ಲಿ ಭಾರತದ 172 ಭಾಷೆಗಳು ನಾಶವಾಗಲಿವೆ. ಇದನ್ನು ಸರಕಾರ ಗಮನಿಸಿದೆಯಾ? ಕೊಡವ, ಕೊರಗ, ಕೊಂಕಣಿ, ಮೊದಲಾದ ಭಾಷೆಗಳು ನೆಗಟಿವ್ ಬೆಳವಣಿಗೆಯನ್ನು ತೋರಿಸುತ್ತಿವೆ.
4. ಹಿಂದಿ ಭಾಷೆಯು ಶೇಕಡಾ 60ರ ಬೆಳವಣಿಗೆ ತೋರಿಸಿದರೆ, ಉಳಿದ ಭಾಷೆಗಳು ಶೇಕಡಾ 5-6 ರ ಪ್ರಗತಿ ತೋರಿಸುತ್ತಿವೆ. ಈ ಅಸಮತೋಲನವನ್ನು ಸರಿ ಮಾಡಬಹುದೆ?
5. ತ್ರಿಭಾಷಾ ಸೂತ್ರವನ್ನು ಕರ್ನಾಟಕ ಒಪ್ಪಿಕೊಂಡಿದೆ. ತಮಿಳುನಾಡು ಒಪ್ಪಿಲ್ಲ. ಹಿಂದೀ ಭಾಷಿಕರು ತ್ರಿಭಾಷಾ ಸೂತ್ರವನ್ನು ಆಂಶಿಕವಾಗಿ ಒಪ್ಪಿಕೊಂಡು ಆಧುನಿಕ ಭಾರತೀಯ ಭಾಷೆಯನ್ನು ಆಯುವುದರ ಬದಲು, ಅಭಿಜಾತ ಭಾಷೆಯಾದ ಸಂಸ್ಕೃತವನ್ನು ಕಲಿಯುತ್ತಾರೆ. ಈ ನಡುವೆ ಹೊಸ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿದ್ದು ಯಾರಿಗೆ?
6. ಕನಿಷ್ಠ ಗ್ರೇಡ್ 5 ರವರೆಗೆ ಬೋಧನಾ ಮಾಧ್ಯಮವು ಮನೆ ಭಾಷೆ/ಮಾತೃಭಾಷೆ/ಸ್ಥಳೀಯ ಭಾಷೆ/ಪ್ರಾದೇಶಿಕ ಭಾಷೆ ಆಗಿರಬೇಕೆಂದು ಹೊಸ ಶಿಕ್ಷಣ ನೀತಿ ಹೇಳುತ್ತದೆ. ಆದರೆ ಸುಪ್ರೀಂ ಕೋರ್ಟು ಸಂವಿಧಾನದ 19(1)(ಎ) ಅಡಿಯಲ್ಲಿ ಇದನ್ನು ನಿರಾಕರಿಸಿದೆ. ಹಾಗಾದರೆ ಈ ಶಿಫಾರಸಿನ ಔಚಿತ್ಯ ಏನು?
7. ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರದ ಕೊಡವ, ತುಳು, ಗೊಂಡಿ, ಜಟಾಪು, ಖೋಂಡ್, ಕಿಸಾನ್, ಕೊಲಾಮಿ, ಕೊಂಡ, ಕೋಯಾ, ಕುಯಿ, ಕುರುಖ್ / ಓರಾನ್, ಮಾಲ್ಟೊ, ಪಾರ್ಜಿ ಮೊದಲಾದ ಭಾಷೆಗಳ ಭವಿಷ್ಯ ಏನು? ಇವುಗಳ ರಕ್ಷಕರು, ಪ್ರೋತ್ಸಾಹಕರು ಯಾರು?
ದಕ್ಷಿಣ ಭಾರತ ಒಟ್ಟಾಗದಿದ್ದರೆ ಮುಂದಿನ ದಿನಗಳು ಕಷ್ಟವಾಗಲಿವೆ. ಡಿಲಿಮಿಟೇಶನ್ ಜ್ಯಾರಿಯಾದಾಗ, ದೆಹಲಿಯಲ್ಲಿ ದಕ್ಷಿಣ ಭಾರತಕ್ಕೆ ಯಾವ ಸ್ಥಾನವೂ ಇರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮದೊಂದು ವಿನಮ್ರ ಪ್ರಯತ್ನ ಅಷ್ಟೆ. ಇದರ ಮುಂದುವರಿಕೆಯಾಗಿ ಬೆಂಗಳೂರಿನಲ್ಲಿ ದಕ್ಷಿಣ ಭಾರತ ಸಮಾವೇಶ ಮಾಡೋಣ. ಆಗ ಬರಲು ಸಿದ್ಧರಾಗಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.
ಲೇಖಕರು: ಪುರುಷೋತ್ತಮ ಬಿಳಿಮಲೆ