ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಧರಣಿ 13ನೇ ದಿನವೂ ಮುಂದುವರಿಯಿತು. ಧರಣಿಗೆ ಎಸ್ಎಫ್ಐ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ನ ಬೆಂಬಲ ವ್ಯಕ್ತಪಡಿಸಿದ್ದು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನೀಡಿರುವ ಉಮಾದೇವಿ ವರದಿಯ ನೆಪ ಹೇಳಿ ಅತಿಥಿ ಉಪನ್ಯಾಶಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳಲು ಬರುವುದಿಲ್ಲವೆಂದು ನುಣುಚಿಕೊಳ್ಳುತ್ತಿದೆ. ಆದರೆ ಉನ್ನತ ಶಿಕ್ಷಣಕ್ಕಾಗಿ ರಚನೆಯಾಗಿರುವ ಕೊಠಾರಿ ಆಯೋಗವು ಉನ್ನತ ಶಿಕ್ಷಣವನ್ನು ಬಲಪಡಿಸಬೇಕಾದರೆ ಕಾಲೇಜುಗಳಿಗೆ ಅಗತ್ಯವಾಗಿರುವ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜುಗಳಿಗೆ ಅಗತ್ಯವಿರುವ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ನೀಡುವಂತೆ ಕೊಠಾರಿ ಆಯೋಗವು ಸೂಚಿಸುತ್ತದೆ. ಆದರೆ ರಾಜ್ಯ ಸರ್ಕಾರವು ಇದನ್ನು ಜಾರಿ ಮಾಡದೆ ಕಡಿಮೆ ಗೌರವಧನಕ್ಕೆ ಹೆಚ್ಚು ದುಡಿಸಿಕೊಳ್ಳುವಂತಹ ಪರಿಸ್ಥಿತಿ ಇದೆ. ಈಗಾಗಲೇ ಹಲವಾರು ಉಪನ್ಯಾಸಕರಿಗೆ ವಯಸ್ಸಾಗಿದ್ದು ಅವರ ಪರಿಸ್ಥಿತಿ ಏನು ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದರು.
ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಅನುಸರಿಸಿದ ಅತಿಥಿ ಉಪನ್ಯಾಸಕರ ನೇಮಕಾತಿ, ವೇತನ ಇತ್ಯಾಧಿಗಳ ಬಗ್ಗೆ ಅಧ್ಯಯನ ಮಾಡಿ ಶೀಘ್ರವೇ ಅತಿಥಿ ಉಪನ್ಯಾಸಕರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಅತಿಥಿ ಉಪನ್ಯಾಸಕರು ಪ್ರತಿ ವರ್ಷವೂ ಸಹ ಹೋರಾಟದಿಂದಲೇ ಪರಿಹಾರ ಪಡೆಯುವಂತಹ ಪರಿಸ್ಥಿತಿ ರಾಜ್ಯದಲ್ಲಿದ್ದು, ಇದಕ್ಕೆ ಶಾಶ್ವತ, ವೈಜ್ಞಾನಿಕ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರು ಸುವರ್ಣಸೌಧ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು ಶೀಘ್ರವೇ ರಾಜ್ಯ ಸರ್ಕಾರವು ಸಮಸ್ಯೆ ಪರಿಹರಿಸಲು ಮುಂದಾಗಬೇಕು. ರಾಜ್ಯವ್ಯಾಪಿ ಎಸ್ಎಫ್ಐ ಸಂಘಟನೆ ಅತಿಥಿ ಉಪನ್ಯಾಸಕರಿಗ ಬೆಂಬಲಿಸುತ್ತದೆ ಎಂದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಧರ್ಮವೀರ್ ಮಾತನಾಡಿ, ಅತಿಥಿ ಉಪನ್ಯಾಸಕರು ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದು, ಧರಣಿಗೆ ಹಲವಾರು ಸಂಘಟನೆಗಳು ಬೆಂಬಲಿಸಿವೆ. ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಸೇರಿ ಸುವರ್ಣಸೌಧದ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಬೇಢಿಕೆ ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎಸ್.ಹುಚ್ಚಯ್ಯ, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಸುನಿಲ್, ಅತಿಥಿ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ತಿಮ್ಲಾಪುರ, ಅತಿಥಿ ಉಪನ್ಯಾಸಕರಾದ ಚೇತನ್, ಎಂ.ಕೆ.ಮಲ್ಲಿಕಾರ್ಜುನ್, ಡಿ.ಹೇಮಲತಾ, ಡಾ.ಸವಿತಾ, ಶ್ವೇತ, ಸೌಮ್ಯ, ಮಲ್ಲಿಕಾರ್ಜುನಯ್ಯ, ಮಹಾದೇವಯ್ಯ, ನಾಗೇಂದ್ರಕುಮಾರ್, ಶಿವಲಿಂಗಯ್ಯ, ಶಿವಯ್ಯ ಮೊದಲಾದವರು ಇದ್ದರು.