Thursday, November 21, 2024
Google search engine
Homeಮುಖಪುಟಡಿಸೆಂಬರ್ 4ರೊಳಗೆ ಕ್ರಮ ಕೈಗೊಳ್ಳದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ - ಅತಿಥಿ ಉಪನ್ಯಾಸಕರ ಸಂಘ ಎಚ್ಚರಿಕೆ

ಡಿಸೆಂಬರ್ 4ರೊಳಗೆ ಕ್ರಮ ಕೈಗೊಳ್ಳದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ – ಅತಿಥಿ ಉಪನ್ಯಾಸಕರ ಸಂಘ ಎಚ್ಚರಿಕೆ

ಸೇವೆಯನ್ನು ಖಾಯಂಗೊಳಿಸುವುದು, ಶಾಶ್ವತ ಭದ್ರತೆ ನೀಡುವ ಬಗ್ಗೆ ಡಿಸೆಂಬರ್ 4ರೊಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಬೆಳಗಾವಿಯ ಸುವರ್ಣಸೌಧದ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜಗಳ ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ.ಧರ್ಮವೀರ್ ಎಚ್ಚರಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರು ಸೇವಾ ಖಾಯಂಗಾಗಿ ಹೋರಾಟ ನಡೆಸುತ್ತಾ ಬಂದಿದಾರೆ. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಬಂದಿವೆ ಎಂದು ದೂರಿದರು.

ಅತಿಥಿ ಉಪನ್ಯಾಸಕರು, ಖಾಯಂ ಉಪನ್ಯಾಸಕರ ರೀತಿಯಲ್ಲಿಯೇ ಎಲ್ಲಾ ಕೆಲಸ ಮಾಡುತ್ತಿದ್ದೇವೆ. ವಾರದಲ್ಲಿ ಖಾಯಂ ಉಪನ್ಯಾಸಕರು 16 ಗಂಟೆ ಕೆಲಸ ಮಾಡಿದರೆ, ಅತಿಥಿ ಉಪನ್ಯಾಸಕರು 15 ಗಂಟೆ ಕೆಲಸ ಮಾಡುತ್ತಿದ್ದೇವೆ. ಪರೀಕ್ಷಾ ಮೇಲ್ವಿಚಾರಕರಾಗಿ, ಮೌಲ್ಯ ಮಾಪಕರಾಗಿ ಇಲಾಖೆ ನೀಡುವ ಎಲ್ಲಾ ಕೆಲಸಗಳನ್ನು ಲೋಪದೋಷವಿಲ್ಲದೆ ನಡೆಸಿಕೊಂಡು ಬರುತ್ತಿದ್ದರೂ ವೇತನದಲ್ಲಿ ಅಜಗಜಾಂತರ ವೆತ್ಯಾಸವಿದೆ ಎಂದು ಹೇಳಿದರು.

ಕೆಲವೊಂದು ಕಡೆ ಪ್ರಾಂಶುಪಾಲರು ಹಾಗೂ ಖಾಯಂ ಸಿಬ್ಬಂದಿಯಿಂದ ಕಿರುಕುಳ ಅನುಭವಿಸುತ್ತಲೇ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಹೀಗಿದ್ದರೂ ಕಾನೂನು ತೊಡಕಿನ ನೆಪ ಹೇಳಿ ನಮ್ಮನ್ನು ಖಾಯಂ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಇದು ಖಂಡನೀಯ. ಹಿಮಾಚಲ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಕಾನೂನು ತೊಡಕು ನಿವಾರಿಸಿ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲಾಗಿದೆ. ಅದೇ ರೀತಿ ನಮ್ಮನ್ನು ಖಾಯಂಗೊಳಿಸಬೇಕೆಂದು ಡಾ.ಧರ್ಮವೀರ್ ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ತಿಮ್ಮಲಾಪುರ ಮಾತನಾಡಿ, ಸರ್ಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರು, ಸಹಕಾರ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಪಂಚಾಯಿತಿ ನೌಕರರನ್ನು ಖಾಯಂಗೊಳಿಸಿದೆ. ಹಾಗೆಯೇ 2021ರ ನವೆಂಬರ್ 23 ರಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದಂತೆ ಕಾಲೇಜು ಶಿಕ್ಷಕರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು, ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವ ಕೊಟ್ಟ ಮಾತನ್ನು ಸಿದ್ದರಾಮಯ್ಯನವರು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಸವಿತ. ಮಾತನಾಡಿ, ರಾಜ್ಯದಲ್ಲಿ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ 14 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಶೇ50ರಷ್ಟು ಮಹಿಳೆಯರಿದ್ದೇವೆ. ಖಾಯಂ ಶಿಕ್ಷಕರ ರೀತಿ ಕೆಲಸ ಮಾಡಿದರೂ ನಮಗೆ ಯಾವುದೇ ಸವಲತ್ತುಗಳಿಲ್ಲ. ಕಳೆದ 20 ವರ್ಷಗಳಿಂದ ಅತಿ ಕಡಿಮೆ ಗೌರವಧನಕ್ಕೆ ದುಡಿಯುತ್ತಾ ಬಂದಿರುವ ಮಹಿಳೆಯರು ತಾಯ್ತನದ ಖರ್ಚು ಭರಿಸಲಾಗದೆ, ತಾಯ್ತನವನ್ನೇ ಮುಂದೂಡಿದ್ದೇವೆ. ಇದು ಒಂದು ರೀತಿಯಲ್ಲಿ ಅಧುನಿಕ ಜೀತಪದ್ದತಿ, ಇದರಿಂದ ನಮಗೆ ಮುಕ್ತಿ ಸಿಗಬೇಕೆಂದರೆ ನಮ್ಮ ಸೇವೆಯನ್ನು ಖಾಯಂ ಮಾಡುವುದೊಂದೇ ದಾರಿ ಎಂದರು.

ಅತಿಥಿ ಉಪನ್ಯಾಸಕರ ಸಂಘದ ಕಾನೂನು ಸಲಹೆಗಾರ ಡಾ.ಹನುಮಂತರಾಯಪ್ಪ ಪಾಲಸಂದ್ರ, ಸದಸ್ಯೆ ಜಲಜಾಕ್ಷಿ, ಕಾರ್ಯದರ್ಶಿ ಡಾ.ಕುಮಾರ್.ಸಿ., ಗೌರವಾಧ್ಯಕ್ಷ ಡಾ.ಮಲ್ಲಿಕಾರ್ಜುನಯ್ಯ. ಖಜಾಂಚಿ ಕಾಂತರಾಜು, ಅತಿಥಿ ಉಪನ್ಯಾಸಕ ಶಂಕರ್ ಹಾರೋಗೆರೆ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular