ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳಿಂದ ಬೇಸರಗೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಮಾಜಿ ಸಚಿವ ವಿ ಸೋಮಣ್ಣ ಡಿಸೆಂಬರ್ 6ರ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ.
ಡಿಸೆಂಬರ್ 7, 8 ಮತ್ತು 9ರಂದು ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಅವರೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ನಮ್ಮ ಪಕ್ಷದಲ್ಲಿ ಯಾರು ಅಸಮಾಧಾನಿತರಿಲ್ಲ. ನಮ್ಮದೇ ಆತಂಹ ಶಕ್ತಿ, ದೂರದೃಷ್ಟಿಯ ಚಿಂತನೆ ಇದೆ. ಹಾಗಾಗಿ ಡಿ 7, 8 ಮತ್ತು 9ರಂದು ನಾವೆಲ್ಲರೂ ದೆಹಲಿಗೆ ಹೋಗಿ ಹೈಕಮಾಂಡ್ ಬಳಿ ನಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹೇಳಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್, ಅರುಣ್ ಸೋಮಣ್ಣ, ಶೈಲಜಾ ಸೋಮಣ್ಣ, , ಸಿ.ಎಂ. ರಾಜಪ್ಪ, ದಾಸೇಗೌಡ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಶ್ರೀಧರ್, ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಬಾವಿಕಟ್ಟೆ ನಾಗಣ್ಣ, ಶಿವಪ್ರಸಾದ್, ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್ವರ್, ಆರ್. ಬಸವರಾಜು, ಗ್ಯಾಸ್ ಬಾಬು, ಪ್ರಕಾಶ್ ಇದ್ದರು.