Saturday, July 27, 2024
Google search engine
Homeಮುಖಪುಟಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಜೋಡೆತ್ತುಗಳು

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಜೋಡೆತ್ತುಗಳು

ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೆ, ಮುಂಬೈಯಿಂದ ಮರಳಿ ಬರುವುದಾಗಿ ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಫೋನ್ ಮಾಡಿ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಗೌರಿಶಂಕರ್ ಮತ್ತು ಮಂಜುನಾಥ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ 40 ಜನ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಅನ್ನುವ ಕುಮಾರಸ್ವಾಮಿ ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ಅವರ ಮಾತು ಕೇಳಲು ನಾವೇನು ದಡ್ಡರೇ? ಎಂದು ಪ್ರಶ್ನಿಸಿದರು.

ಸರ್ಕಾರಕ್ಕೆ ನಮ್ಮ ಪಕ್ಷದ 136 ಜನ ಶಾಸಕರು ಮತ್ತು ಪಕ್ಷೇತರರ ಬೆಂಬಲವಿದೆ. ಕುಮಾರಸ್ವಾಮಿ ಅವರೇ ಎನ್ ಡಿಎಯಿಂದ ಮೊದಲು ಹೊರಬನ್ನಿ, ಒಬ್ಬ ವ್ಯಕ್ತಿಗೆ ಸ್ಪಷ್ಟವಾದ ರಾಜಕೀಯ ನಿಲುವು ಇರಬೇಕು ಎಂದು ಅವರಿಗೆ ಹೇಳಿದೆ. ನಂತರ ಈ ಕುರಿತು ನಾನು ಹೆಚ್ಚು ಪ್ರತಿಕ್ರಿಯೆ ನೀಡಲು ಹೋಗಲೇಇಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರ ದ್ವಂದ್ವ ನಿಲುವು ಅವರಿಗೆ ಅರ್ಥವಾಗುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಸೇರಿದ್ದಾರೆ, ತೆಲಂಗಾಣದಲ್ಲಿ ಕೆಸಿಆರ್ಗೆ ಪರವಾಗಿ ಮಾತನಾಡುತ್ತಾರೆ. ಕೆಸಿಆರ್ ಅವರ ಮಗ ಮೋದಿ ಅವರನ್ನು ಸುಳ್ಳ ಎಂದು ಕರೆಯುತ್ತಾರೆ. 18 ಜನ ಶಾಸಕರನ್ನು ಕರೆದುಕೊಂಡು, ಅವರನ್ನು ಖುರ್ಚಿಯಿಂದ ಇಳಿಸಿದವರ ಜತೆಗೆ ಮಿಲನವಾಗಿದ್ದೇವೆ, ಸಂಸಾರ ನಡೆಸುತ್ತೇವೆ ಎಂದರೆ ಸಿದ್ದಾಂತ ಎನ್ನುವುದು ಎಲ್ಲಿಗೆ ಹೋಯಿತು? ಎಂದು ಕೇಳಿದರು.

ಕುಮಾರಸ್ವಾಮಿ ಅವರೇ, ನೀವು ಸಹ 20 ಮತ್ತು 14 ತಿಂಗಳು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದೀರಿ. ನಿಮಗೆ ಆಡಳಿತ ಮಾಡಲು ಬಿಡಲಿಲ್ಲವೇ? ವಿರೋಧ ಪಕ್ಷವಾಗಿ ಟೀಕೆಗಳನ್ನು ಮಾಡಿದರೂ ಬಿಜೆಪಿಯವರಿಗೆ ನಾವು ಆಡಳಿತ ಮಾಡಲು ಬಿಡಲಿಲ್ಲವೇ? ಆದರೆ ನೀವು ಅಧಿಕಾರ ನನಗೆ ಸಿಗಲಿಲ್ಲ ಎಂದು ಅಸೂಯೆಯಿಂದ ಕೈ, ಕೈ ಉಜ್ಜಿಕೊಂಡು ಕುಳಿತರೇ ಏನು ಪ್ರಯೋಜನ? ಎಂದರು.

ಸಿದ್ದರಾಮಯ್ಯ ಮಾತು

ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಾವಿದ್ದಾಗ ಜನತಾದಳ ಸೆಕ್ಯುಲರ್ ಆಗಿತ್ತು. ಈಗ ಎಸ್ ಕಿತ್ತೋಗಿ ಕೇವಲ ಜನತಾದಳ ಆಗಿ ಉಳಿದಿದೆ. ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ದಾಂತದವರೆಲ್ಲಾ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜೊತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ “ಬಿ” ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷ ಆಗಿಯಷ್ಟೆ ಸೀಮಿತವಾಗಿದೆ. ಜೆಡಿಎಸ್ ನ ಡಬ್ಬಲ್ ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಜೊತೆಗೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular