ನೆಲ ಹಣ್ಣಾಗುವ ಹಾಗೆ ಮಳೆಯಾದರೆ ಬಾರೆ ಒಳಗೆ, ಬದಿನೊಳಗೆ, ಹುಲ್ಲಾಳು, ಬೀಳಿನೊಳಗೆ ಅಲ್ಲಲ್ಲೇ ಅಣಬೇಳುತ್ತವೆ. ಮರಣಬೆ, ಬೇರಣಬೆ, ಅಕ್ಕಿಣಬೆ, ತಪ್ಪಣಬೆ, ಹುಲ್ಲಣಬೆ ಹೀಗೆ ತರಾವರಿ ದರ್ಶನ.ಅಣಬೆ ಕಾಲ ಮುಗೀತು ಹೋದ ಹತ್ತದ ಮಳೆ ಅಖೈರಿಗೆ. ಅವು ಹುಟ್ಟೋದು ಏನಿದ್ರೂವೆ ಮುಂದಿನ ಉತ್ತರೆ ಮಳಿಗೇನೋ? ಬರಗಾಲ ಮಳೆ ಹೋಗಿ ಮಾಗಿ ಬಿಸಿಲು ಎದುರಾಗಿದೆ. ಹೊರಗೆ ಮುಖ ವೊಡ್ಡಿದರೆ ಬಿಸಿಲ ಮೋವು. ಬಿಸಿಲು ಬಲಿಯತೊಡಗಿ ಬ್ಯಾಸ್ಸಿಗೆ ಒಣಿ. ಖೂಳೆ ಕಾಲ ಮುಗಿದು ಕಣಗಾಲವೂ ಆಗಿದೆಯೇನೋ ಎನ್ನುವ ಹಾಗೆ. ಇನ್ನೆಲ್ಲಿಯ ಮಳೆ ಧೂಳಚಯ. ವಿಶಾತಿ ಅನುರಾಧಾ ಮಳೆ ಆಗೊಂದು ಈಗೊಂದು ಹದ ಬಿದ್ದರೆ ಬೀಳಬಹುದೇನೋ. ಮುಂದಿನ ಈ ದಿನಕೇ ಮಳೆಬಂದರೆ ಅಣಬೆ ಎನ್ನಂಗೆ ಆಗಿತ್ತು. ಮೇವು ಬಾಡ್ಲಾಗಿ ನೆಲ ಒಣಗಿ ಪೈರು ಆಗಲೇ ಕತ್ತಿಕ್ಕಿ ಭೂಮಿ ನೋಡುತಿತ್ತು. ಆಗಲೇ ಪಾಡು ಮುಗೀತು ಎಂದುಕೊಂಡು. ಇರೋ ರಾಗಿ ಬೆಳೆ ಒಡೆಬತ್ಲಾಗುತ್ತಿದೆ. ಯಿಡಿ ಯಿಡಿದರೆ ಎಬ್ಬೆಟ್ಟು ಹೊರಗೆ ಎನ್ನುವ ಹಾಗೆ ಬೆಳೆ ಕೈಗೆ ಸಿಗದಂತಾಗಿದೆ.
ಉತ್ತರೆ ಮಳೆ ಕೊನೆ ಪಾದ, ಅತ್ತದ ಮಳೆ ಮೊದಲ ಪಾದ, ಒಂದೊಂದು ಎರಡೆರಡು ಹದ ಮಳೆ ಬರಲಾಗಿ ನೆಲ ನೆನೆದು ಹಣ್ಣಾಗಿ ಅಂಗೂ ಯಿಂಗೂವೆ ಅಣಬೆ ಎದ್ದೇ ಎದ್ದವು, ಬಿದ್ದ ಮಳೆಗೆ ಬಗ್ಗನೆ. ಆ ಮೇಲೆ ಮಾರನಾಮಿ ಹಿರಿಯರ ಹಬ್ಬ ಹತ್ತಿರವಾದಂತೆಲ್ಲಾ ಮಳೆ ಹೋಗೇ ಬಿಟ್ಟಿತು ಮುನಿಸಿಕೊಂಡಿದ್ದರಂಗೆ. ಹೋದ ಮಳೆ ಹಿಂತಿರುಗಿಲ್ಲ. ತನುವಾಗಿ ಹದವಾಗಿ ಅಣಬೆ ಏಳಲು ನೆಲ ಅಲ್ಲಲ್ಲೆ ಮಾಗಿತ್ತು ಉತ್ತರೆ ಮಳೆ ಅವದಿಯಲ್ಲಿ. ಆಮೇಲೆ ಆಮೇಲೆ ದಿನಪರತಿ ಮೇಲೆ ನೆಲಕ್ಕೆ ಹನಿಲಿಲ್ಲ ಮಳೆ ಬೆಳೆ ಉಳಿಯುವಂಗಾದ್ರೂವೆ.
ಸದುವಾದ ಮೆದುವಾದ ಖಂಡವಾದ ನೆಲದಲ್ಲಿ; ಹಾಗೆಯೇ ಬಗ್ಗನೆ ಎದ್ದವು ಪುರುಸೊತ್ತಿಲ್ಲದ ಹಾಗೆ ಹೊತ್ರಿಗೂ ಬೈಗೂವೆ ಅಣಬೆ. ಅಂಗೆಯಾ ಬಗ್ಗಾಡಿ ಹಾಯ್ಕಂಡು ಕೈಚೀಲುಕ್ಕೋ, ಮಡಲಿಗೋ, ಹೆಗಲ ಮೇಲಿನ ವಲ್ಲಿಗೋ ಹಾಕಿಕಳಂಗೆ. ಅಲ್ಲೋಸು ಇಲ್ಲೋಸು ಸಿಕ್ಕೇ ಸಿಕ್ಕಿವು. ಕುರಿ ದನ ಹೊಲ್ದ ಕಡೆ ಹೋದೋರೀಗೆ. ಕೆಂಬಾರೆ, ಬೂತುನುಗುಡಿ, ಬಸವನಗುಡ್ಡೆ, ಹೊಸಕಟ್ಟೆ ಏರಿವಾಳೆ, ಕೋಡಿಹಳ್ಳ, ಕೆಳನೆಲ ಹುಡಿಕಿದಂಗೆ ನೆಡಕಂಡು ಹೋದಂಗೆ ಅಣಬೆ ಸಿಗೋವು ಒಂದೊತ್ತು, ಎರಡೊತ್ತಿನ ತರಕಾರಿ ಬಳಕೆಗೆ ಆಗೊವೊಷ್ಟು.
ಒಂದೊಂದಿನ ಒಂದು ಬೊಗಸೆ ಸಿಕ್ಕಿದರೆ, ಒಂದೊಂದಿನ ಒಂದೊಂದು ಮಡಲು. ಮಟ್ಟಿದರೆ ಎಲ್ಲಿ ಮಸ್ಟಾಗುವವೋ? ಅನ್ನಂಗೆ. ಮಲ್ಲಿಗೆ ಹೂವಿನಂಗೆ ಎದ್ದು ನೆಲಾರದಲ್ಲೇ ಹರಳಿರೋವು ನೆಲಕ್ಕೆ ನೆರಳಾಗೆ ನಿಂತ ಪುಟ್ಟ ಪುಟ್ಟ ಕೊಡೆಗಳಂತೆ. ಆಡಿನೋರು, ಕುರಿಯೋರು, ದನಿನೋರನ್ನ ಅಲ್ಲೆಲ್ಲಾರ ಅಣಬೆ ಎದ್ದಾವಾ ಎಂದು ಕೇಳೋದು. ಅವುರು ಅಲ್ಲಿಕಂಡವು. ಇಲ್ಲಿಕಂಡವು ಎಂದು ವರ್ತಮಾನ ಕೊಟ್ಟರೆ ಹುಡಿಕೆಂಡು ಹೋಗೋದು. ಹೋದ ಕೂಡಲೇ ಅವೇನು ಸಿಕ್ಕುತ್ತಿರಲಿಲ್ಲ ಬಿಡಿ ಅಷ್ಟು ಸುಲುವಾಗಿ ಕಣ್ಣಿಗೆ ಬೀಳೋವಾ ಅವು. ಆಯವಾದ ನೆಲ ಅಂದಾಜು ಮಾಡಿ ಅವೂವೆ ಹುಟ್ಟಿರೋವು. ಸೋಪಟ್ಲು ಪಟ್ಟುಕೊಂಡು ಹುಡುಕಿದರೇ ಅವು ಸಿಕ್ಕೋವು. ಬೇಲಿನೋ, ಉತ್ತನೂ, ಬದಿನೊಬ್ಬೇನೋ, ದಿಣ್ಣೇನೋ, ಹುಲ್ಲು ಬನ್ನಿನೋ ಅಡವು ಮಾಡಿಕೊಂಡು. ಹುಡಕದೆ ಅಷ್ಟು ಸುಲುಭವಾಗಿ ಕಣ್ಣಿಗೆ ಬೀಳಲು ಅಣಬೇನು ಹೊಲ್ದಗೆ ಹುಟ್ಟೋ ಅಣ್ಣೆ ಸೊಪ್ಪೇ? ಎಲ್ಲಾ ಕಾಲುಕ್ಕೂ ಕಣ್ಣಿಗೆ ಕಾಣೋಕೆ ತರುಗಾಡಿಕೊಂಡು ಕೊಯ್ಕಳಕೆ.
ಮಗೆಮಳೆ ವೈನಾಗಿ ನಡೆಸಿಕೊಳ್ಳಲಿಲ್ಲ. ಸ್ವಾನಾಡಿತು ಬಿತ್ತನೆ ನಡೀತಾದ್ರೂವೆ ಹೊಲಗಳಲ್ಲಿ ಪೈರು ಮಖವಾಗಿ ನಿಲ್ಲದೆ ಬಹಳ ಕಡೆ ನೆಲಯಿಡಿಯಿತು. ಒತ್ತಟ್ಟಿಗೆ ಬಿತ್ತನೇನೂವೆ ಒಂದು ಮಖವಾಗದೆ ಬಿದ್ದ ಮಳೆಗೆ ಬಿತ್ತಿದ್ದೂವೆ ಉಳಿದೆ ದನ ಕಟ್ಟಿ, ಆಡುಕುರಿ ಕೂಡಿ ಮೇಯಿಸುವಂತಾಗಿದೆ. ಮಗೆ ಮಳೆಯೂ ಅಷ್ಟಕಷ್ಟೇಯಾ ಹೊಸ ನೀರಾಡಲೇಯಿಲ್ಲ. ನೀರು ಮಸಕಾಡುವ ಹಾಗೆ ಉಬ್ಬೆ ಮಳೆ ಬಿದ್ದಿದ್ದರೂವೆ ಬೆಳೆ ಅಪೂಟ ಹೋಗುತ್ತಿರಲಿಲ್ಲವೇನೋ? ಮಳೆ ಬಹಳ ಪೇಚಾಡಿಸಿದೆ ಬೆಳೆಗಾರರನ್ನು ಈ ವರ್ಷವೆಲ್ಲಾ.
ಉತ್ತರೆ ಮಳೆ ಹತ್ತದ ಮಳೆ ನಡವುವಂತ್ರ ಬುಟ್ಟಣಬೆ, ಬೇರಣಬೆ ಬೇಕಾದಂಗೆ ಸಿಕ್ಕಿವು; ಹೋದ ಮಳೆ ಅವಗೆಲ್ಲೋ ಬಿದ್ದು. ಒಂದು ಸೋಟು, ಒಂದುಗೇಣು, ಒಂದೂವರೆ ಗೇಣುದ್ದ ಇರೋವು ಬೇರು ವರಿವಿಗೂವೆ ನೆಲದ ತನುವಿನ ಹಾದಿಗುಂಟ ಬೇರಿಳಿದುಕೊಂಡಂಗೆ. ಬರೋಬರಿ ಒಂದು ಮೊಳಕೂವೆ ಮುಂದಾದ ಉದ್ದನೆಯ ಬೇರಣಬಿ ಸಿಕ್ಕಿವು, ಅಣಬಿ ಹುಡಿಕೆಂಡು ಹೋದಾಗ. ಕಿತ್ತರೆ ಬೇರುಮುಂಟ ಬರೋವು. ಕೆಲವೇ ಕೆಲವು ಮೋಟಾಗವು. ಭೂಚಕ್ರದ ಕೊಡೆಯಂಗೆ ಅರಳಿದ ಅಣಬಿ ಹೋದ ಹತ್ತದ ಮಳೆಯಿಂದ ಆಚಿಕೆ ಬೇಕಾದಂಗೆ ಸಿಕ್ಕಿವು.
ಉಜ್ಜಜ್ಜಿ ರಾಜಣ್ಣ