ರಾಜಕಾರಣ ಬರೀ ಚುನಾವಣೆಗೆ ಸೀಮಿತವಾಗಬಾರದು, ರಾಜಕಾರಣಿಯಾದವರು ಕಲೆ, ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ತಿಳಿಸಿದ್ದಾರೆ.
ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ನೀನಾಸಂ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಿನ ರಾಜಕಾರಣ ಚುನಾವಣೆಯನ್ನು ಕೇಂದ್ರೀಕರಿಸಿದೆ. ನಮ್ಮ ತಂದೆ ಜೆ.ಎಚ್. ಪಟೇಲ್ ಹಾಗೂ ರಾಮಕೃಷ್ಣ ಹೆಗಡೆ ಅವರು 24 ಗಂಟೆ ಚುನಾವಣೆ ಬಗ್ಗೆ ಯೋಚಿಸುತ್ತಿರಲಿಲ್ಲ. ಬದಲಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಒಲವುಳ್ಳವರಾಗಿದ್ದರು. ಹಾಗಾಗಿ ರಾಜಕಾರಣಿ ಯಾದವನು ಸಾಮಾಜಿಕ ಕಳಕಳಿಯುಳ್ಳವನಾಗಿರಬೇಕು ಎಂದು ಹೇಳಿದ್ದಾರೆ.
ನಮ್ಮ ತಂದೆ ಸಿಎಂ ಆಗಿದ್ದಾಗ 20 ವರ್ಷ ಸಿನಿಮಾ ಬ್ಯಾನ್ ಮಾಡಬೇಕು. ಆಗ ಮಾತ್ರ ನಾಟಕ ಕಲೆ ಜೀವಂತವಾಗಿರುತ್ತದೆ ಎಂದಿದ್ದರು. ಆದರೆ ನಾಟಕ ಕಲೆ ಯಾವತ್ತೂ ಸಾಯುವುದಿಲ್ಲ. ಸಾವಿರಾರು ವರ್ಷಗಳಿಂದ ನಾಟಕ ಕಲೆ ಇದೆ. ಮುಂದೆ ಸಾವಿರಾರು ವರ್ಷ ನಾಟಕ ಕಲೆ ಜೀವಂತವಾಗಿರುತ್ತದೆ ಎಂದರು.
ತಾವು ಕೂಡ ತಮ್ಮೂರಿನಲ್ಲಿ ಬೆಪ್ಪು ತಕ್ಕಡಿ ಬೋಳೆಶಂಕರ ನಾಟಕ ಮಾಡಿಸಿದ್ದನ್ನು ಸ್ಮರಿಸಿದ ಅವರು ನಾಟಕ ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸಬೇಕು ಎಂದು ಹೇಳಿದ್ದಾರೆ.
ತುಮಕೂರಿನ ಝೆನ್ ಟೀಮ್ ನ ಉಗಮ ಶ್ರೀನಿವಾಸ್ ಕಳೆದ 20 ವರ್ಷಗಳಿಂದ ನಾಟಕ ಪ್ರದರ್ಶನಗಳನ್ನು ಆಯೋಜಿಸಿ ಮುಂದೆ ಸಮಾಜವನ್ನು ಹೇಗೆ ಕಟ್ಟಬೇಕು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ ಎಂದರು. ತುಮಕೂರು ಯಾವತ್ತೂ ನನ್ನೂರು ಎಂಬ ಭಾವನೆ ಬರುತ್ತದೆ. ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ನಾನು ಇಂಜಿನಿಯರ್ ಓದಿದ್ದು. ಆಗೆಲ್ಲಾ ನಾಟಕಗಳನ್ನು ನೋಡುತ್ತಿದೆ ಎಂದರು.
ನಾಟಕಗಳ ಮೂಲಕ ಜನರಿಗೆ ಅರಿವು ಮೂಡಿಸಬೇಕು, ಪ್ರೇರೇಪಿಸಬೇಕು, ಯಾವುದು ಒಳ್ಳೆಯ ಮಾರ್ಗ ಎಂಬುದನ್ನು ತೋರಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಟೂಡಾ ಮಾಜಿ ಅಧ್ಯಕ್ಷ ಚಂದ್ರಶೇಖರ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಆರ್. ಹುಲಿನಾಯ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಹಾಗೂ ಝೆನ್ ಟೀಮ್ ನ ಉಗಮ ಶ್ರೀನಿವಾಸ್ ಇದ್ದರು.