ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾರತದ ಉಭಯ ಚೇತನಗಳಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶ ಕಂಡ ಇಬ್ಬರು ಮಹಾನ್ ಶಕ್ತಿಗಳನ್ನ ಸ್ಮರಿಸಬೇಕು. ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ನಾನು ಒಂದು ವೇಳೆ ದೇಶ ಸೇವೆ ಸಂದರ್ಭದಲ್ಲಿ ಸಾವನ್ನಪ್ಪಿದರೆ ಅದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ನನ್ನ ರಕ್ತದ ಪ್ರತಿಯೊಂದು ಹನಿಯೂ ಈ ದೇಶದ ಶಕ್ತಿಶಾಲಿಯಾಗಲು ನೆರವಾಗುತ್ತದೆ ಎನ್ನುವ ಇಂದಿರಾ ಗಾಂಧಿಯವರ ಮಾತು ಅವರ ದೇಶಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಜನಪರ ಆಡಳಿತದ ಮೂಲಕ ಇಡೀ ದೇಶದಲ್ಲೇ ದೊಡ್ಡ ಕ್ರಾಂತಿ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಭಾರತದ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಸದಾ ಅಮರರಾಗಿದ್ದಾರೆ ಎಂದು ಹೇಳಿದ್ದಾರೆ.