Friday, November 22, 2024
Google search engine
Homeಮುಖಪುಟನಾಗ ನೆಲದಲ್ಲಿ.....

ನಾಗ ನೆಲದಲ್ಲಿ…..

ಬಾಬಾಸಾಹೇಬರು ಬುದ್ಧಧಮ್ಮ ದೀಕ್ಷೆ ಪಡೆದ ನಾಗಪುರದ ನೆಲ ನೆನಸಿಕೊಂಡರೆ ಮೈಯಲ್ಲಿ ಪುಳಕ. ನೋಡಬೇಕೆಂದುಕೊಂಡಿದ್ದರೂ ಸಮಯ ಒದಗುತ್ತಿರಲಿಲ್ಲ. ಅನುಗಾಲದ ಗೆಳೆಯ ಮುಕುಂದ್ ಹೋಗೋಣ ಅಂದಾಗ ಮರು ಮಾತಾಡದೇ ಒಪ್ಪಿಕೊಂಡೆ. ನಾಗಪುರದ ಕನಸು ಕಾಣುತ್ತಾ ಹೊರಟೆ. ಕೇವಲ ಪುಸ್ತಕಗಳಲ್ಲಿ ಓದಿದ್ದ ನೆಲವನ್ನು ಮುಟ್ಟಿ ಮೈಮನಗಳನ್ನು ತುಂಬಿಕೊಳ್ಳುವ ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದೆ. ಅಂಬೇಡ್ಕರರನ್ನು ನಾನು ಭಾವುಕವಾಗಿ ಯಾವುತ್ತೂ ಎದುರುಗೊಂಡವನಲ್ಲ. ತಾತ್ವಿಕವಾಗಿ ಬೌದ್ಧಿಕವಾಗಿ ನನ್ನೊಳಗೆ ಬಾಬಾಸಾಹೇಬರನ್ನು ಇಳಿಸಿಕೊಂಡಿದ್ದೆ. ಆದರೆ ನಾಗಪುರಕ್ಕೆ ಹೋಗುವ ನಿರ್ಧಾರವಾದಾಗ ಅಂಬೇಡ್ಕರರ ಬಗೆಗೆ ಭಾವುಕನಾಗತೊಡಗಿದೆ. ಅನೇಕ ಗೆಳೆಯರು ಕೇಳಿದರು ʼಏನಾದರೂ ಬುದ್ಧಧಮ್ಮಕ್ಕೆ ಮತಾಂತರವಾಗ್ತಿಯಾ? ಅಂತ ಅದು ಮತಾಂತರ ಅಲ್ಲ. ಮರಳಿ ಮನೆಗೆ. ಆದರೆ ನಾನು ಯಾವ ಧರ್ಮಗಳನ್ನು ಅಪ್ಪಿಕೊಳ್ಳುವುದಿಲ್ಲ. ಧರ್ಮನಿರಪೇಕ್ಷ ಮನಸ್ಸು ನನ್ನದು ಎಂದಿದ್ದೆ. ಆದರೆ ೧೯೫೬ ರಲ್ಲಿ ಬಾಬಾ ಸಾಹೇಬರು ತೆಗೆದುಕೊಂಡು ಆ ತೀರ್ಮಾನದ ನೆಲವನ್ನು ನೋಡಬೇಕೆಂಬುದು ಮಾತ್ರ ಎಲ್ಲಾದರ ಆಚೆಗೆ ತುಡಿಯುತ್ತಿತು. ಅದರ ಪರಿಣಾಮವಾಗಿ ಹಿಂದುಮುಂದು ಯೋಚಿಸದೆ ಗೆಳೆಯರೊಂದಿಗೆ ಹೊರಟೆ. ನಮ್ಮೂರಿನಿಂದ ನಿರಂತರವಾಗಿ ಹದಿನೆಂಟರಿಂದ ಇಪ್ಪತ್ತು ಗಂಟೆ ಪ್ರಯಾಣ. ಹೆಚ್ಚು ಕಡಿಮೆ ಒಂದು ದಿನದ ದೀರ್ಘ ಯಾನ. ಬಸ್ಸಿನಲ್ಲಿ ಹೋಗಲು ಒಂದು ದಿನ. ಬರಲು ಒಂದು ದಿನ.

1956 ರಲ್ಲಿ ಬಾಬಾಸಾಹೇಬರು ಯಾವುದೇ ಆಧುನಿಕ ಸಂಪರ್ಕ ಮಾಧ್ಯಮಗಳಿಲ್ಲದ ಹೊತ್ತಿನಲ್ಲಿ ಐದು ಲಕ್ಷದ ಜನರೊಂದಿಗೆ ನಾಗಕುಲದ ನೆಲದಲ್ಲಿ ಮರಳಿ ಮನೆಗೆ ಹೋದದ್ದು ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಬಹುಮುಖ್ಯವಾದ ಚಲನೆಯನ್ನು ಉಂಟುಮಾಡಿದೆ. ಆದಾದ ನಂತರದಲ್ಲಿ ನಿರಂತರವಾಗಿ ಈ ಮರಳಿಮನೆಗೆ ಕಾರ್ಯಗಳು ನಡೆಯುತ್ತಿವೆ. ಅರವತ್ತೇಳು ವರ್ಷದ ಈ ಸಂದರ್ಭದಲ್ಲಿ ಮತ್ತಷ್ಟು ಚಾರಿತ್ರಿಕವಾಗಿ ಮಹತ್ವದ್ದಾಗಿದೆ. ಅರವತ್ತೇಳು ವರ್ಷಗಳ ಹಿಂದೆ ಬಾಬಾ ಸಾಹೇಬರು ಬುದ್ಧಧಮ್ಮದ ದೀಕ್ಷೆ ಪಡೆದು ಆ ರಾತ್ರಿ ಆ ಐದು ಲಕ್ಷ ಅನುಯಾಯಿಗಳೊಂದಿಗೆ ಅಲ್ಲಿಯೇ ಮಲಗಿ ಪವಿತ್ರ ನೆಲವಾಗಿಸಿದ್ದಾರೆ. ಇವತ್ತಿಗೂ ನಾಗಪುರದ ನೆಲ ಪವಿತ್ರ ಭೂಮಿಯಾಗಿದೆ; ಬುದ್ಧ ಬಾಬಾಸಾಹೇಬರ ಶ್ರದ್ಧಾಳುಗಳಿಗೆ ಶ್ರದ್ಧಾನೆಲವಾಗಿದೆ. ಅದಷ್ಟೇ ಅಲ್ಲ. ಬಾಬಾಸಾಹೇಬರು ಈ ನೆಲವನ್ನು ಆಯ್ದುಕೊಂಡಿದ್ದಕ್ಕೂ ಸಾಂಸ್ಕೃತಿಕ ಸಂಬಂಧವಿದೆ.

ನಾಗಪುರ ಇವತ್ತು ಆರ್ಥಿಕವಾಗಿ ಸಬಲವಾದ ನೆಲ. ಅಲ್ಲದೇ ಕೋಮುವಾದದ ತರಬೇತಿ ಮತ್ತು ತಯಾರಿ ಕೇಂದ್ರ. ನಾಗಪುರದ ಮೂಲದಿಂದಲೇ ಭಾರತವನ್ನು ಹಿಡಿದಲುಗಾಡಿಸಲಾಗುತ್ತಿದೆ. ಅಂಥ ಮೂಲಭೂತವಾದದ ನೆಲದಲ್ಲಿ ಬುದ್ಧನ ಕರುಣೆ, ಬಾಬಾಸಾಹೇಬರ ಸಾಮಾಜಿಕ ನ್ಯಾಯ ಇನ್ನೂ ಉಸಿರಾಡುತ್ತಿರುವುದು ವಿಶೇಷ. ಎರಡು ಪರಸ್ಪರ ವಿರುದ್ಧ ತತ್ವಗಳಿಗೂ ನಾಗಪುರ ಸಾಕ್ಷಿಯಾಗಿ ನಿಂತಿದೆ. ಕೇವಲ ಒಂದೆರಡು ಕಿಲೋಮೀಟರ್ಗಳ ಅಂತರದಲ್ಲಿ ಇವೆಲ್ಲವೂ ಸಂಭವಿಸುತ್ತಿವೆ. ಆದರೆ ನಾಗಪುರದ ಸೌತ್ ಭಾಗ ತನ್ನ ಮೂಲತನವನ್ನು ಕಳೆದುಕೊಂಡಿಲ್ಲ. ಸೌತ್ ನಾಗಪುರ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ಬಾಬಾಸಾಹೇಬರನ್ನು ದೇಶದಾದ್ಯಂತ ತಲುಪಿಸುವಲ್ಲಿ ರಚನಾತ್ಮಕ ಕೆಲಸ ಮಾಡುತ್ತಿದೆ. ಬಹುಪಾಲು ದಲಿತರೇ ತುಂಬಿರುವ, ಸ್ಲಂನ ರೀತಿಯಂತಿದ್ದ ಸೌತ್ ನಾಗಪುರ ಪುಟಿದೆದ್ದು ಆಧುನಿಕವಾಗಿ ತಲೆಯೆತ್ತಿ ನಿಂತಿದೆ. ಯಾವುದನ್ನು ನಿರ್ಲಕ್ಷ್ಯ ಮಾಡಲಾಗಿತ್ತೋ ಆ ನೆಲ ಇಂದು ಪವಿತ್ರ ದಲಿತರ ಅಸ್ಮಿತೆಯ ನೆಲವಾಗಿದೆ.

ಈ ಹೊತ್ತಿನ ಸೌತ್ ನಾಗಪುರದಲ್ಲಿ ಈ ತರದ ಸ್ವಯಂ ಆಸಕ್ತಿಯುಳ್ಳ ಹಿರಿಯರಿಂದ ಹೊಸ ತಲೆಮಾರಿನವರೆಗೂ, ಈಗಿನ ಹರೆಯದವರು ಸೇರಿ ಸ್ವಯಂಸೇವಕರಿದ್ದಾರೆ. ಬಾಬಾಸಾಹೇಬರ ತತ್ವ, ನಿಲುವುಗಳನ್ನು ಅರಿತು ತಲುಪಿಸುವವರಿದ್ದಾರೆ. ಅವರೆಲ್ಲರ ಎದೆಯಲ್ಲಿ ಅಂಬೇಡ್ಕರ್ ಬಿತ್ತಿದ ಅರಿವು ಇದೆ, ಅಕ್ಷರವಿದೆ. ಸಂಘಟನೆಯ ಸತ್ವವಿದೆ. ಹಾಗಾಗಿ ವರುಷಕ್ಕೊಮ್ಮೆ ಈ ಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸೌತ್ ನಾಗಪುರದ ಪ್ರತಿ ಕೇರಿಯಲ್ಲಿ ಬಂದವರಿಗೆ ಊಟ ನೀಡಲು, ವಸತಿ ಒದಗಿಸಲು ಒಟ್ಟಾಗಿ ದುಡಿಯುತ್ತಾರೆ. ಆ ತೊಡಗಿಸಿಕೊಳ್ಳುವಿಕೆಯಲ್ಲಿಯೇ ಸಂಭ್ರಮಿಸುತ್ತಾರೆ. ಆ ಸೌತ್ನಾಗಪುರದಲ್ಲಿ ಎರಡು ದಿನ ತಂಗುವ ಅವಕಾಶ ನಮಗೆ ಒದಗಿಬಂತು.
ನಾವೆಲ್ಲ ನಾಗಪುರಕ್ಕೆ ತಲುಪುವಾಗ ರಾತ್ರಿ ಹತ್ತೂವರೆಯಾಗಿತ್ತು. ಅಂಥ ಹೊತ್ತಿನಲ್ಲಿ ಖಾಸಗಿ ಹೋಟೆಲ್ನಲ್ಲಿ ರೂಂ ಪಡೆಯುವುದು ದುಬಾರಿ. ಸುಮಾರು ಐವತ್ತು ಮಂದಿಯ ತಂಡ ನಮ್ಮದು. ಆಗ ನಮಗೆ ಪರಿಚಯವಾದವರು ರವಿಕೀರ್ತಿ ಮತ್ತವರ ತಂಡ. ಕರ್ನಾಟಕದಿಂದ ಹೋಗಿ ಮಹಾರಾಷ್ಟ್ರದಲ್ಲಿ ಮದುವೆಯಾಗಿ ಅಲ್ಲಿಯೇ ನೆಲೆಸಿ ಕರ್ನಾಟಕದಿಂದ ಬರುವವರಿಗೆಲ್ಲ ಪ್ರೀತಿಯಿಂದ ಆತಿಥ್ಯ ನೀಡುವ, ಕನ್ನಡದಲ್ಲಿಯೇ ಮಾತನಾಡಿ ನಮ್ಮವರಾಗುವ ರವಿಕೀರ್ತಿ ತೋರುವ ಕಾಳಜಿ ಮರೆಯಲು ಸಾಧ್ಯವಿಲ್ಲ. ಬಂದವರಿಗೆಲ್ಲ ಊಟ, ವಸತಿ, ಮಾರ್ಗದರ್ಶನ ಮಾಡಲು ಇವರ ತಂಡವೇ ಮೈಮೇಲೆ ಹೊತ್ತು ನಿಭಾಯಿಸುತ್ತದೆ.

ತಂಡದಲ್ಲಿದ್ದ ಡಾ.ಪ್ರಕಾಶ್ ಕಾಮರ್ಸ್ ಪ್ರೊಫೆಸರ್ ಪರಿಚಯವಾದರು. ಹಿಂದಿ, ಇಂಗ್ಲಿಷ್ ಬಲ್ಲವರು. ಪ್ರಕಾಶರಿಗೆ ಕನ್ನಡ ಬಾರದು. ಮೂಲ ಸೌತ್ನಾಗಪುರ. ಅವರು ನಮ್ಮನ್ನು ತಮ್ಮ ಮನೆಗೆ ನಮ್ಮನ್ನು ಕರೆದೊಯ್ದು ೧೯೫೬ರ ನಂತರದ ನಾಗಪುರವನ್ನು ಪರಿಚಯಿಸಿದರು. ತಿಳಿಸುವಲ್ಲಿ ಅವರಿಗಿದ್ದ ಉತ್ಸಾಹ, ಅವರ ಚಿಕ್ಕ ಮಕ್ಕಳು, ಮಡದಿ ಎಲ್ಲರೂ ಬಾಬಾಸಾಹೇಬರ ಬಗೆಗೆ ಹೇಳುತ್ತಿದ್ದ ಮಾತುಗಳು, ತೋರುತ್ತಿದ್ದ ಪ್ರೀತಿ, ನಡವಳಿಕೆ … ಜೊತೆಗಿದ್ದವರನ್ನೆಲ್ಲ ಸೆಳೆದುಬಿಟ್ಟಿತು. ಕೆಲವು ಅಂಬೇಡ್ಕರ್ವಾದಿಗಳಿದ್ದಾರೆ. ಅಂಬೇಡ್ಕರರನ್ನು ಬಾಯ್ತುಂಬಾ ಆರಾಧಿಸುತ್ತಾರೆ. ಮನೆಯಲ್ಲಿ ಎಲ್ಲ ದೇವರನ್ನು ಪೂಜಿಸುತ್ತಾರೆ. ಆದರೆ ಡಾ.ಪ್ರಕಾಶ್ ಮನೆಯಲ್ಲಿ ಅಂಬೇಡ್ಕರ್, ಬುದ್ಧ ಬಿಟ್ಟು ಮತ್ಯಾವುದೇ ದೇವರ ಪೋಟೋ ಕಾಣಲಿಲ್ಲ. ಪ್ರಕಾಶರ ತಂದೆ ಬಾಬಾಸಾಹೇಬರ ಜೊತೆಯಲ್ಲಿ ಬುದ್ಧಧಮ್ಮದ ದೀಕ್ಷೆ ಪಡೆದವರು. ಕಳೆದ ಕೊರೋನಾದ ಎರಡನೇ ಅಲೆಯಲ್ಲಿ ಪ್ರಕಾಶರ ತಂದೆ ತೀರಿಕೊಂಡರಂತೆ. ಪ್ರಕಾಶ್ ಶುದ್ಧ ಆರೆಸ್ಸೆಸ್ ನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನಾನು ಕೇಳಿದೆ ʼಇದು ಸಂಘರ್ಷಕ್ಕೆ ಕಾರಣವಾಗುವುದಿಲ್ಲವೆʼ ಅಂತ. ಆ ಕಾಲೇಜಿನಲ್ಲಿ ಹುದ್ದೆ ʼಎಸ್ಸಿʼಗೆ ಮೀಸಲಾಗಿತ್ತು. ಹಾಗಾಗಿ ನನಗೇ ಈ ಹುದ್ದೆ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತುʼ ಅಂದರು. ʼಅವರ ಕೇಂದ್ರದಲ್ಲಿ ಬಾಬಾಸಾಹೇಬರ ಚಿಂತನೆ ಬಿತ್ತುವ ಅವಕಾಶ ನನ್ನಂಥವರಿಗೆ ಒದಗಿದೆ ಅದನ್ನು ಮಾಡುತ್ತಿರುವೆʼ ಎಂದು ಸೇರಿಸಿದರು ಅಲ್ಲದೆ ಸೌತ್ ನಾಗಪುರದ ಕೆಲ ಕೇರಿಗಳಿಗೆ ಕರೆದೊಯ್ದು ಪರಿಚಯಿಸಿರು. ʼಈ ಕಾಲಕ್ಕೆ ಅಂಬೇಡ್ಕರರನ್ನು ತಲುಪಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತು ನಾಗಪುರದ ತುಂಬೆಲ್ಲಾ ನಿಮ್ಮ ತಂಡ ದುಡಿಯುತಿದೆ. ನಿಮ್ಮೆಲ್ಲರಿಗೂ ನಾವು ರುಣಿಯಾಗಿರಬೇಕುʼ ನಾವೆಂದಾಗ. ʼಇದು ನಮ್ಮ ತಂದೆ ಬಾಬಾ ಸಾಹೇಬರ ಶ್ರಮ. ಭಾರತದ ಯಾವ ಮೂಲೆಯಲ್ಲಿ ದಲಿತರಿದ್ದರೂ ನಾವೆಲ್ಲ ಒಂದೇ ರಕ್ತದ ಅಣ್ಣತಮ್ಮಂದಿರುʼ ಎನ್ನುವ ಅವರ ಮಾತು ಈಗಲೂ ಕಿವಿಯಲ್ಲಿ ಗುಯ್ಗುಡುತ್ತಲೇ ಇದೆ. ರವಿಕೀರ್ತಿ, ಡಾ.ಪ್ರಕಾಶ್ ಇವರಷ್ಟೇ ಅಲ್ಲ. ಇವರಂಥ ಅನೇಕ ಸಮಾನ ಮನಸ್ಕರು ಜೊತೆಗೂಡಿ ಇಂಥ ಈ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ವಿರೋಧಿ ನೆಲದಲ್ಲಿ ಬಾಬಾ ಸಾಹೇಬರನ್ನು ತಲುಪಿಸುವ ಈ ಮಾದರಿ ನಿಜಕ್ಕೂ ಅನುಕರಣನೀಯ. ಸಂಘರ್ಷಗಳನ್ನು ಎದುರುಗೊಳ್ಳುವುದು ಕರುಣೆ ಮತ್ತು ಪ್ರೀತಿಯಿಂದ ಎಂಬುದನ್ನು ಈ ನೆಲ ಸಾರುತ್ತಿದೆ.
ಈಗ ಸೌತ್ ನಾಗಪುರ ಸಾಕಷ್ಟು ಮುಂದುವರೆದಿದೆ. ವಿದ್ಯಾವಂತರಿದ್ದಾರೆ, ಉದ್ಯೋಗಿಗಳಿದ್ದಾರೆ, ಉದ್ಯಮಿಗಳಿದ್ದಾರೆ. ಮನೆಗಳ ರಚನೆ ಬದಲಾಗಿದೆ. ಆಧುನಿಕ ಮನೆಗಳು ರೂಪುಗೊಂಡಿವೆ. ಪ್ರತಿ ಮನೆಗಳಲ್ಲೂ ಅಂಬೇಡ್ಕರ್ ಮತ್ತು ಬುದ್ಧದೇವನ ಪೋಟೋಗಳು ಮಾತ್ರ ಇವೆ. ಎರಡು ದಿನ ಅಲ್ಲಿ ಸುತ್ತಾಡಿದರೂ ಒಂದೇ ಒಂದು ದುರ್ಗಾದೇವಿ ಪೂಜೆ ಸೌತ್ ನಾಗಪುರದಲ್ಲಿ ಕಾಣಲಿಲ್ಲ. ಅದನ್ನು ದಾಟಿ ಸೆಂಟ್ರಲ್ ನಾಗಪುರಕ್ಕೆ ಬಂದರೆ ಏರಿಯಾ ಏರಿಯಾದಲ್ಲೂ ಅದ್ದೂರಿ ದುರ್ಗಾಪ್ರತಿಷ್ಠಾಪನೆ, ಪೂಜೆ, ಡಿಜೆ ಅಬ್ಬರ…

ಬಾಬಾಸಾಹೇಬರ ದೀಕ್ಷಾ ನೆಲದಲ್ಲಿ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಹೆಣ್ಣು ಗಂಡು ಮಕ್ಕಳಾದಿಯಾಗಿ ದೀಕ್ಷೆಗೆ ಸಿದ್ಧರಾಗಿದ್ದರು. ಎಲ್ಲಿ ನೋಡಿದರೂ ಬಿಳಿಬಟ್ಟೆಯೇ. ಕಿರಿಮಕ್ಕಳಿಂದ ಮುಪ್ಪಿನ ವಯಸ್ಸಿನವರು ಹಬ್ಬದಂತೆ ಪಾಲ್ಗೊಂಡಿದ್ದರು. ದೀಕ್ಷಾ ನೆಲೆದಿಂದ ಸುತ್ತಮುತ್ತ ಸುಮಾರು ಹತ್ತು ಕಿ.ಮೀ ದೂರ ಜನ ನಡೆದು ಬರುತ್ತಿದ್ದರು. ನಡೆದೇ ಸಾಗಬೇಕು. ರಸ್ತೆ ತುಂಬಾ ಜನವೋ ಜನ. ಇಕ್ಕೆಲಗಳಲ್ಲಿ ದೂರದಿಂದ ಬಂದವರಿಗೆ ಹಣ್ಣು, ಪೇಯ, ಊಟ, ತಿಂಡಿ, ಮಜ್ಜಿಗೆ ನೀಡುವುವವರ ಮೈಮನಗಳಲ್ಲೂ ಪುಳಕ ಹೊಮ್ಮುತ್ತಿತ್ತು. ಬುದ್ಧದೇವರ ಕರುಣೆ, ಬಾಬಾಸಾಹೇಬರ ನಿಲುವು ಕೂಡಿದಂತಿತ್ತು.

ದೀಕ್ಷಾ ನೆಲದ ಸುತ್ತಮುತ್ತ ಗಿಜಿಗಿಜಿ ಅನ್ನವಷ್ಟು ಜನರಿದ್ದರೂ ತಮಗೆ ತಾವೇ ಸ್ವಯಂ ಶಿಸ್ತು ಕಾಪಾಡಿಕೊಂಡು ಸಾಗುತ್ತಿದ್ದುದು ವಿಶೇಷ. ಆ ಶಿಸ್ತು ಬಂದಿದ್ದಾದರೂ ಎಲ್ಲಿಂದಲೋ? ಜಾಗವಿರದಿದ್ದರೂ ಪರಸ್ಪರ ಹೊಂದಿಕೊಂಡು ಕೂತುಕೊಳ್ಳುವುದು, ತಿನಿಸುಗಳನ್ನು ಹಂಚಿಕೊಳ್ಳುವುದು, ಉರಿಬಿಸಿಲಿನಲ್ಲಿ ನೀರನ್ನು ಪರಸ್ಪರ ವಿನಿಮಯಮಾಡಿಕೊಂಡು ಕುಡಿಯುವುದು ತೀರಾ ಸಹಜವಾಗಿತ್ತು. ʼಇಷ್ಟೊಂದು ಜನ ಸೇರಿದ್ದಾರೆ ಎಂದರೆ ಪಿಕ್ಪಾಕೇಟರು, ಕಿಸೆಗಳ್ಳರು ಎಷ್ಟು ಜನ ಇರೋರು. ನಮ್ಕಡೆ ಆಗಿದ್ರೆ ಜೇಬುಗಳ್ಳರು ವರ್ಷಕ್ಕಾಗುವಷ್ಟು ದುಡಿಮೆ ಮಾಡಿಕೊಳ್ಳುತ್ತಿದ್ದರು. ಇಲ್ಲಿ ಅಂತ ಒಂದೇ ಒಂದು ಪ್ರಸಂಗ ಕಾಣುತ್ತಿಲ್ಲವಲ್ಲʼ ಎಂದು ಗೆಳೆಯ ರಾಜಣ್ಣ ಹೇಳಿದಾಗ ಹೌದೇನಿಸಿತು. ಬುದ್ಧತತ್ವವನ್ನು ಈ ಜನಸಂದಣಿಯ ನಡುವೆಯೂ ಹೇಗೆ ಪಾಲಿಸುತ್ತಿದ್ದಾರೆ ಎನಿಸಿತು.

ಇಡೀ ನಾಗಪುರವೇ ದೀಕ್ಷೆಗೆ ಸಿದ್ಧವಾಗಿತ್ತು. ಎಲ್ಲಿ ನೋಡಿದರೂ ಧಮ್ಮ ಚಕ್ರ, ಪಂಚಶೀಲ ತತ್ವಗಳ ಪೋಟೋ, ರಚನೆಗಳು, ಬುದ್ಧ, ಬಾಬಾಸಾಹೇಬರ ಪ್ರತಿಮೆ, ಪೋಟೋಗಳು ನಾವು ನೋಡಿದ ನಾಗಪುರದ ತುಂಬೆಲ್ಲಾ ಆವರಿಸಿದ್ದವು. ಆಸುಪಾಸಿನಲ್ಲಿನ ನಾಗಲೋಕ, ಡ್ರ್ಯಾಗನ್ ಪ್ಯಾಲೇಸ್, ಅಂಬೇಡ್ಕರ್ ಮ್ಯೂಸಿಯಂ ನಲ್ಲಿಯೂ ಜನ ಕಿಕ್ಕಿರಿದಿತ್ತು. ಅಂಬೇಡ್ಕರ್ ಮ್ಯೂಸಿಯಂ ನಲ್ಲಿ ಬಾಬಾಸಾಹೇಬರು ಬಳಸುತ್ತಿದ್ದ ಟೋಪಿ, ಕೋಟು, ಸ್ಯಾಕ್ಸ್, ರೇಡಿಯೋ, ಕನ್ನಡಕ.. ಗಳ ಸಂಗ್ರಹಗಳು.. ಬುದ್ಧ ತತ್ವಗಳು, ಅಷ್ಟಾಂಗಮಾರ್ಗಗಳು, ಪಂಚಶೀಲತತ್ವಗಳ ಮುದ್ರಿಕೆಗಳು, ಪುಸ್ತಕಗಳು ಎಲ್ಲಾ ಕಡೆಯೂ ಆವರಿಸಿದ್ದವು.

ಆ ಸಂಭ್ರಮ, ಜನಸಂದಣಿಯ ನಡುವೆ ನಾವಿದ್ದ ದಿನ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆ ನೆಲಕ್ಕೆ ಭೇಟಿಯಿತ್ತರು. ಯಾವುದೇ ಪ್ರೋಟೋಕಾಲ್ ಇಲ್ಲದೆ ನಮ್ಮ ನಡುವೆಯೇ ಅವರ ವಾಹನ ಹಾರನ್ ಮಾಡಿ ದಾರಿ ಬಿಡಿಸಿಕೊಂಡಿತು. ಇದು ಅಂಥ ತೇಜಸ್ಸಿನ ಮುಂದೆ ಅಧಿಕಾರಗಳು ಶೂನ್ಯ ಎಂಬುದರ ಸಂಕೇತವೇನೋ.. ಎರಡು ದಿನ ಅಂಬೇಡ್ಕರರನ್ನು ಮೈದುಂಬಿಕೊಳ್ಳುತ್ತ, ನೆಲವನ್ನು ಮುಟ್ಟಿ ರೋಮಾಂಚನಗೊಳ್ಳುತ್ತ ಬದುಕು ಸಾರ್ಥಕಗೊಂಡ ಭಾವದಲ್ಲಿ ತೇಲಿದೆವು. ನನ್ನೊಂದಿಗೆ ಡಾ.ಮುಕುಂದ್, ನಾಗರಾಜ, ಚೇಳೂರು ಶಿವನಂಜಪ್ಪ, ನನ್ನ ಪದವಿತರಗತಿ ಗೆಳೆಯ ರಾಜಣ್ಣ, ಕುಮಾರ್.. ಇನ್ನೂ ಅನೇಕ ಗೆಳೆಯರು ನನ್ನ ಈ ಪಯಣದ ಜೊತೆಯಾಗಿದ್ದು ಮತ್ತಷ್ಟು ಖುಷಿ ನೀಡಿತ್ತು. ಪ್ರತಿ ವರ್ಷ ಮನೆಮಂದಿಯನ್ನೆಲ್ಲ ಕರೆದೊಯ್ದು ಇಂಥ ಸುದಿನಕ್ಕೆ ಸಾಕ್ಷಿಯಾಗಬೇಕೆನಿಸಿತು ಮನಸಿನಲ್ಲಿ.
ಪತ್ತಿಕೆ ಮಾಧ್ಯಮಗಳು ಈ ಕಡೆ ನೋಡಿಲ್ಲ ನಿಜ. ಈ ಜನ ಅವರಿಗೆ ಗಾಬರಿ ಹುಟ್ಟಿಸಿರಬೇಕು. ೧೯೫೬ರಲ್ಲಿ ಐದು ಲಕ್ಷ ಮಂದಿ ನಂತರ ಅರವತ್ತೇಳು ವರ್ಷದಲ್ಲಿ ಲೆಕ್ಕ ಹಾಕಿ ನೋಡಿದರೆ ಎಂಥವರಿಗೂ ಗಾಬರಿಯೇ. ಹಾಗಾಗಿ ಮಾಧ್ಯಮ ಇದನ್ನು ಮರೆಮಾಚುತ್ತಿದೆ. ಇಂಥ ಪವಿತ್ರ ನೆಲ ನೋಡಿ ಮೈದುಂಬಿಕೊಳ್ಳಲು ಪರಿತಪಿಸುತ್ತಿದ್ದವರು ಲೆಕ್ಕವಿಲ್ಲದಷ್ಟು ಜನ, ಅಲ್ಲಿಯೇ ಮಲಗಿ ಪಾವನವಾಗಿಸಿಕೊಂಡವರೆಷ್ಟು ಜನವೋ! ಆ ರಾತ್ರಿ ಪವಿತ್ರ ನೆಲದಲ್ಲಿ ಮಲಗಲು ರಾತ್ರಿಯಾದರೂ ನಡೆದುಹೋಗುತ್ತಿದ್ದ ಲಕ್ಷಾಂತರ ಜನರನ್ನು ನೋಡಿದರೆ ಬಾಬಾಸಾಹೇಬರ ಕಾಲದ ದೀಕ್ಷೆಯ ದಿನಗಳು ಮರುಕಳಿಸಿದವು. ಶ್ರದ್ಧೆಯಿಂದ ಭಾಗವಹಿಸುವ ಶ್ರದ್ಧಾಕೇಂದ್ರವಾಗಿ ಯಾವುದೇ ಕಂದಾಚಾರವಿಲ್ಲದೇ ಒಳಗೊಳ್ಳುವುದು ಇಲ್ಲಿ ನಿರಂತರವಾಗಿ ಸಾಗುತ್ತಲೇ ಇದೆ. ಈ ವರ್ಷ ದೀಕ್ಷೆ ತೆಗೆದುಕೊಂಡವರು ಇಪ್ಪತ್ತು ಲಕ್ಷ ಮಂದಿ ಎಂದು ಅಂದಾಜು ಲೆಕ್ಕವಿದೆ. ಆದರೆ ಅಲ್ಲಿ ಸೇರಿದ್ದ ಸಂಖ್ಯೆ ಇಪ್ಪತ್ತೈದು ಲಕ್ಷಕ್ಕೂ ಮೀರಿತ್ತು. ಅವರೆಲ್ಲರ ಶ್ರದ್ಧಾರೂಪಿ ಬಾಬಾಸಾಹೇಬರು ಮತ್ತು ಬುದ್ಧದೇವ ಆಗಿದ್ದು ಆ ಜನರ ಮುಖದಲ್ಲಿ ತೋರುತ್ತಿತ್ತು. ಈ ವರ್ಷ ಇಪ್ಪತೈದು ಲಕ್ಷ. ಮುಂದೆ ಈ ಸಂಖ್ಯೆ ದ್ವಿಗುಣ, ತ್ರಿಗುಣಗೊಳ್ಳುವ ದಿನ ದೂರವಿಲ್ಲ. ಮರಳಿ ಮನೆಗೆ.

ಲೇಖಕರು: ಡಾ.ರವಿಕುಮಾರ್ ನಿಹ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular