Friday, November 22, 2024
Google search engine
Homeಜಿಲ್ಲೆರಂಗ ಚಳವಳಿಗೆ ತಿಪಟೂರು ಪ್ರೇರಣೆ

ರಂಗ ಚಳವಳಿಗೆ ತಿಪಟೂರು ಪ್ರೇರಣೆ

ಸುಮಾರು 40 ವರ್ಷಗಳ ಹಿಂದೆ ನನ್ನೂರು ತಿಪಟೂರಿನಲ್ಲಿ ಪ್ರತಿ ವರ್ಷ ಕಲ್ಪತರು ಹಿರಿಯ ವಿದ್ಯಾರ್ಥಿಗಳ ಸಂಘದವರು ರಾಜ್ಯ ಮಟ್ಟದ ನಾಟಕ ಸ್ಪರ್ಧೆ ನಡೆಸುತ್ತಿದ್ದರು. ತುಮಕೂರಿನ ಎಚ್.ಎಂ.ಟಿ ಲಲಿತ ಕಲಾಸಂಘ ತಿಪಟೂರಿನ ಮುಂಗಾರು ಹುಡುಗರು ಸೇರಿದಂತೆ ರಾಜ್ಯದ ಬಹಳಷ್ಟು ಜಿಲ್ಲೆಯಿಂದಲೂ ಹವ್ಯಾಸಿ ಹಾಗೂ ವೃತ್ತಿಪರ ತಂಡಗಳು ಬರುತ್ತಿದ್ದವು. ಸುಮಾರು ಒಂದು ವಾರಗಳ ಕಾಲ ಪ್ರತಿ ದಿನ 2 ರಿಂದ 3 ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ‘ಕೆರೆಗೆ ಹಾರ’ ‘ಜೋಕುಮಾರಸ್ವಾಮಿ’, ‘ಹಯವದನ’ ‘ಲಚ್ಚಿ’, ‘ಜೈಸಿದ್ದನಾಯಕ’ ಹೀಗೆ ವಿಶೇಷ ವಸ್ತುಗಳನ್ನೊಳಗೊಂಡ ನಾಟಕಗಳು ಪ್ರದರ್ಶನಗೊಳ್ಳುತ್ತಿತ್ತು. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಈ ನಾಟಕ ಸ್ಪರ್ಧೆ ನಡೆಯುತ್ತಿದ್ದರಿಂದ ಒಂದು ವಾರಗಳ ಕಾಲ ನಮಗೆಲ್ಲ ಹಬ್ಬರೋ ಹಬ್ಬ. ತಿಪಟೂರಿನ ಬಯಲು ರಂಗಮಂದಿರ (ಈಗ ನರಸಿಂಹರಾಜ್ಉ ರಂಗಮಂದಿರ)ದಲ್ಲಿ ನಡೆಯುತ್ತಿದ್ದ ಅಷ್ಟೂ ನಾಟಕಗಳನ್ನು ಪ್ರತಿ ವರ್ಷ ನೋಡುತ್ತಿದ್ದೆ. ಬಯಲು ರಂಗಮಂದಿರದ ಪ್ರವೇಶ ದ್ವಾರದಲ್ಲಿ ಪುಟ್ಟ ಲಾಟೀನ್ ನಲ್ಲಿ ಸಿದ್ದಣ್ಣಜ್ಜ ಮಾಡುತ್ತಿದ್ದ ಬೋಂಡ ಖರೀದಿಸಲು ಕಷ್ಟಪಟ್ಟು 1 ರುಪಾಯಿ ಹಣ ಹೊಂದಿಸಿ ಬೋಂಡದೊಂದಿಗೆ ನಾಟಕ ವೀಕ್ಷಣೆಗೆ ತೆರಳುತ್ತಿದ್ದೆ.

ಒಂದು ವಾರಗಳ ಕಾಲ ನಡೆಯುವ ನಾಟಕ ಸ್ಪರ್ಧೆ ಬಳಿಕ ಫಲಿತಾಂಶ ಹೊರ ಬೀಳುತ್ತಿತ್ತು. ಪ್ರತಿ ವರ್ಷ ಕನ್ನಡದ ಪ್ರಮುಖ ನಾಯಕ ನಟರು ಬಂದು ಬಹುಮಾನ ವಿತರಿಸುತ್ತಿದ್ದರು. ಕಲ್ಯಾಣ ಕುಮಾರ್ ಸೇರಿದಂತೆ ಬಹಳಷ್ಟು ಹಳೆ ಕಾಲದ ನಟರನ್ನು ನಾನು ನೋಡಿದ್ದೆ ಅಲ್ಲಿ. ಪ್ರತಿ ದಿನ ನಡೆಯುತ್ತಿದ್ದ ನಾಟಕಗಳು ನನ್ನೊಳಗೆ ಎಂಥದ್ದೋ ಸೆಳೆತ ಮೂಡಿಸುತ್ತಿತ್ತು. ಅಲ್ಲದೇ ನಮ್ಮ ತಂದೆ ಪೌರಾಣಿಕ ಪಾತ್ರದಲ್ಲಿ ಪ್ರಮುಖವಾಗಿ ಶಕುನಿ ಪಾತ್ರದಲ್ಲಿ ಅಭಿನಯಿಸಿದ್ದನ್ನು ಕಂಡಿದ್ದೆ. ಆದರೆ ತಿಪಟೂರಿನ ಕಲ್ಪತರು ಹಿರಿಯ ವಿದ್ಯಾರ್ಥಿಗಳ ಸಂಘ ನಡೆಸುತ್ತಿದ್ದ ೀ ನಾಟಕ ಸ್ಪರ್ಧೆಯಲ್ಲಿ ಬಂದಂತಹ ವಿಶೇಷ ಕಥಾ ವಸ್ತುಗಳು ನನ್ನ ಮೇಲೆ ಪ್ರಭಾವ ಬೀರಿತು. ಪ್ರಾಥಮಿಕದಿಂದ ಪ್ರೌಢಶಾಲೆ ಹಾಗೂ ಕಾಲೇಜು ಮೆಟ್ಟಿಲು ಹತ್ತುವವರೆಗೂ ಈ ನಾಟಕ ಸ್ಪರ್ಧೆಗಳು ನಡೆದವು. ಅದೇ ಸಂದರ್ಭದಲ್ಲಿ (1990ರ ಆರಂಭದ ದಶಕ) ಸಾಕ್ಷರತಾ ಆಂದೋಲನ ದೇಶಾದ್ಯಂತ ವ್ಯಾಪಿಸಿದಾಗ ತಿಪಟೂರಿನಲ್ಲಿ ಸಾಕ್ಷರತಾ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವಂತಹ ಸಂದರ್ಭದಲ್ಲಿ ಬೈಪ್ ಸಂಸ್ಥೆ ಮುಖ್ಯಸ್ಥರಾದ ಡಾ.ಜಿ.ಎಂ.ಎಸ್.ರೆಡ್ಡಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಹಳ್ಳಿಗಳಲ್ಲಿ ಸಾಕ್ಷರತಾ ಆಂದೋಲನವು ಬೀದಿ ನಾಟಕ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನರನ್ನು ಸಾಕ್ಷರತಾ ಆಂದಲೋನದಲ್ಲಿ ಪ್ರೇರೇಪಿಸಿದ್ದನ್ನು ಮರೆಯುವಂತಿಲ್ಲ. ಬಳಿಕ ಕಾರಣಾಂತರದಿಂದ ಕಲ್ಪತರು ಹಿರಿಯ ವಿದ್ಯಾರ್ಥಿ ಸಂಘಗಳ ಚಟುವಟಿಕೆ ನೇಪಥ್ಯಕ್ಕೆ ಸರಿಯಿತು. ಸರಿ ಸುಮಾರು ಅದೇ ಸಮಯದಲ್ಲಿ ನಟರಾಜ್ ಹೊನ್ನವಳ್ಳಿ ನೇತೃತ್ವದ ಪ್ರೋಥಿಯೋ ತಂಡದ ಜೊತೆಗೆ ನನ್ನ ನಂಟು ಬೆಳೆಯಿತು.

ಆಕಸ್ಮಿಕವಾಗಿ ಪರಿಚಯರಾದ ನಟರಾಜ ಹೊನ್ನವಳ್ಳಿ ಅವರ ಬಳಿ ನನ್ನ ನಾಟಕದ ಆಸಕ್ತಿಯನ್ನು ತಿಳಿಸಿದೆ. ಪ್ರತಿ ದಿನ ಅವರು ಹೊಸ ಹೊಸ ನಾಟಕಗಳ ಬಗ್ಗೆ ಹೇಳುತ್ತಾ ಹೋದರು. ಗ್ರೀಕ್ ನಾಟಕಗಳು, ಸಂಸ್ಕೃತ ನಾಟಕಗಳು, ಆಧುನಿಕ ನಾಟಕಗಳು, ಹಳೆ ಕನ್ನಡದ ನಾಟಕಗಳು. ನಾಟಕದ ಬಗ್ಗೆ ಹೇಳಿದ್ದು ಮಾತ್ರವಲ್ಲ ಆ ನಾಟಕಗಳನ್ನು ಇಡಿಯಾಗಿ ಓದಿ ಅರ್ಥ ಮಾಡಿಸುತ್ತಿದ್ದರು. ಸರಿ ಸುಮಾರು ಅದೇ ಅವಧಿಯಲ್ಲಿ ಲಂಕೇಶರ ಗುಣಮುಖ ನಾಟಕವನ್ನು ನಿರ್ದೇಶಿಸುತ್ತಿದ್ದರು. ನಾವು ಆಗಷ್ಟೇ ಡಿಗ್ರಿ ಮುಗಿಸಿ ಓಡಾಡುತ್ತಿದ್ದೆವು. ಆಗ ಅವರು ನಾಟಕದಲ್ಲಿ ಅಭಿನಯಿಸುತ್ತೀಐ ಎಂದು ಕೂಡಲೇ ಒಪ್ಪಿಕೊಂಡೆ. ನೀನಾಸಂನಲ್ಲಿ ತರಬೇತಿ ಪಡೆದು ಬಂದಿದ್ದ ನಟರಾಜ ಹೊನ್ನವಳ್ಳಿ ಅವರು ನಾಟಕ ಕಲಿಸುತ್ತಿದ್ದ ವಿಧಾನವೇ ಡಿಫರೆಂಟ್ ಆಗಿತ್ತು. ಪ್ರತಿ ದಿನ ಆಟ, ಬಾಡಿ ಮೂಮೆಂಟ್, ವಾಯ್ಸ್ ಎಕ್ಸಸೈಜ್ ಹೀಗೆ ಹೊಸ ಹೊಸ ನಟನಾ ವಿಧಾನಗಳನ್ನು ಕಲಿಸಿಕೊಟ್ಟರು. ಆ ನಾಟಕದಲ್ಲಿ ನನಗೆ ರಜ್ಜಿ ಪಾತ್ರವನ್ನು ಕೊಟ್ಟಿದ್ದರು. ಅದು ದೊರೆ ನಾದಿರ್ ಶಾ ನ ದಂಡನಾಯಕನ ಪಾತ್ರ. ಆ ನಾಟಕದ ಪ್ರಮುಖ ಎರಡು ಪಾತ್ರಗಳಾದ ನಾದೀರ್ ಶಾ ವನ್ನು ಧರ್ಮೇಂದ್ರ ಅರಸ್ ಹಾಗೂ ಹಕೀಮ ಅಲಾವಿಖಾನ್ ಪಾತ್ರವನ್ನು ಈಗ ಸಿನಿಮಾದಲ್ಲಿ ಪ್ರಸಿದ್ದಿಯಾಘಿರುವ ಅಚ್ಯುತ ಕುಮಾರ್ ಆಭಿನಯಿಸುತ್ತಿದ್ದರು.

ತಿಪಟೂರಿನ ಬಯಲು ರಂಗಮಂದಿರದಲ್ಲಿ 4 ಪ್ರದರ್ಶನಗಳು ಕಂಡಿತು. ಇದಾದ ಬಳಿಕ ಮತ್ತೆ ಓದು, ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆವು. ಅದೇ ವೇಳೆ ಬೆಂಬಳೂರಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದರು. ಅದಕ್ಕಾಗಿ ನಟರಾಜ ಹೊನ್ನವಳ್ಳಿ ಅವರು ಮಾಸ್ತಿ ಅವರ ಕಥಾ ವಾಚಿಕೆ ನಾಟಕ ಸಿದ್ದಪಡಿಸುತ್ತಿದ್ದರು. ಆ ನಾಟಕದಲ್ಲೂ ನಾನು ಅಭಿನಯಿಸಿದ್ದೆ. ಆ ನಾಟಕ ನನ್ನ ಮೂರು ಗೆಳೆಯರು ನಿನಾಸಂನಲ್ಲಿ ಕಲಿತು ಬಂದಿದ್ದರು. ಆ ನಾಟಕದಲ್ಲೂ ನಾನು ಆಬಿನಯಿಸಿದ್ದೆ ಆ ನಾಟಕ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಕುಟುಂಬ ಸದಸ್ಯರು ನಾಟಕ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ನೀನಾಸಂ ನಾಟಕಗಳನ್ನು ಪ್ರತಿ ವರ್ಷ ಪ್ರೋಥಿಯೋ ತಂಡದವರು ಕರೆಸುತ್ತಿದ್ದರು. ಇಡೀ ತಂಡದ ಜೊತೆ ನಾನು ತುಂಬಾ ಕನೆಕ್ಟ್ ಆಗುತ್ತಿದ್ದೆ.

ಕಲ್ಪತರು ಹಿರಿಯ ವಿದ್ಯಾರ್ಥಿಗಳ ತಂಡದವರ ಬಳಿಕ ನೀನಾಸಂ ನಾಟಕವನ್ನು ನಿರಂತರವಾಗಿ ಪ್ರೋಥಿಯೂ ತಂಡ ಆಯೋಜಿಸುತ್ತಿತ್ತು. ತಿಪಟೂರು ಒಂದು ರೀತಿಯಲ್ಲಿ ಸಾಂಸ್ಕೃತಿಕವಾಗಿ ತೆರೆದುಕೊಳ್ಳುವ ದಿನಮಾನಗಳು. ಹೊಸ ಅಲೆಯ ನಾಟಕಗಳು ಹೊಸಹೊಸ ಲೇಖಕರು ಹೀಗೆ ಸಾಹಿತ್ಯ ಜಗತ್ತು ಹಾಗೂ ರಂಗ ಪಯಣದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಸುಮಾರು 15 ಮಂದಿ ಅದರಲ್ಲಿ ಬಹುಪಾಲು ನನ್ನ ಗೆಳೆಯರು ನೀನಾಸಂ ಪದವೀಧರರಾದರು. ನಾನು ಮಾತ್ರ ನೀನಾಸಂಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ರಂಗಭೂಮಿ ಬಗ್ಗೆ ನನ್ನ ತುಡಿತ ಇದ್ದೇ ಇತ್ತು. ಇದೇ ಸಮಯದಲ್ಲಿ ನನಗೆ ಕನ್ನಡಪ್ರಭ’ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ಕೆಲಸ ಸಿಕ್ಕಿತು. ಸುಮಾರು 4 ವರ್ಷಗಳ ಕಾಲ ಇದ್ದ ಶಿವಮೊಗ್ಗದಲ್ಲಿ ನಾನು ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯವಾಗಲು ಕಾರಣವಾಯಿತು. ಅಲ್ಲಿದ್ದ ಗೆಳೆಯ ಹೊನ್ನಾಳಿ ಚಂದ್ರಶೇಖರ್, ಅವರ ನಮ್ ಟೀಮ್ ರಂಗ ತಂಡದ ಜೊತೆ ಕೆಲಸ ಮಾಡಲು ಸಾಧ್ಯವಾಯಿತು. ಪ್ರತಿದಿನ ನನ್ನ ಕಚೇರಿಗೆ ಕೆಲಸ ಇದ್ದುದು ರಾತ್ರಿ 8 ಗಂಟೆ ನಂತರ. ಆಗ ನಾವು ಬೆಳಗ್ಗೆಯೆಲ್ಲಾ ಡಿವಿಎಸ್ ಕಾಲೇಜು ಆಡಿಟೋಯಂ, ಕುವೆಂಪು ರಂಗಮಂದಿರ, ಬಿಬಿ ಸ್ಟ್ರೀಟ್ ನ ಶಾಲೆಯೊಂದರಲ್ಲಿ ನಾಟಕಗಳ ತಾಲೀಮಿನ ಜೊತೆ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಸುಮಾರು 4 ವರ್ಷಗಳಳ ಕಾಲ ನಿರಂತರವಾಗಿ ಶಿವಮೊಗ್ಗದಲ್ಲಿ ರಂಗ ಸಂಘಟನೆಯಲ್ಲಿ ತೊಡಗಿಕೊಂಡೆ. ನಾಟಕಗಳಿಗೆ ಹಾಡುಗಳನ್ನು ಬರೆಯುತ್ತಿದ್ದೆ. ತಿಪಟೂರಿನಲ್ಲಿ ಹುಟ್ಟಿದ್ದ ರಂಗಭೂಮಿ ಅಭಿರುಚಿ ಶಿವಮೊಗ್ಗದಲ್ಲಿ ಚಿಗುರಿತು. ಸುಮಾರು 4 ವರ್ಷಗಳ ನಂತರ ಬೆಂಗಳೂರಿಗೆ ವರ್ಗಾವಣೆಯಾಗಿ ಬಂದೆ. ಅಲ್ಲಿ ನನಗೆ ಪರಿಚಯವಾಗಿದ್ದೇ ರಂಗ ನಿರ್ದೇಶಕ ಸಿಜಿಕೆ. ಆಗ ಅವರು ಗಾಂಧಿ ಭವನದ ನಿರ್ದೇಶಕರಾಗಿದ್ದರು. ಪ್ರತಿದಿನ ಅವರನ್ನು ಬೆಂಗಳೂರು ವಿವಿಯ ಗಾಂಧಿ ಭವನದಲ್ಲಿ ಮತ್ತೆ ಕೆಲವು ಸಲ ರವೀಂದ್ರ ಕಲಾಕ್ಷೇತ್ರದ ಹಿಬಂದಿಯಲ್ಲಿರುವ ಸಂಸ’ ಬಯಲು ರಂಗಮಂದಿರದಲ್ಲಿ ಭೇಟಿಯಾಗುತ್ತಲೇ ಇದ್ದೆ. ಅವರು ನಿರ್ದೇಶಿಸುತ್ತಿದ್ದ ನಾಟಕಗಳ ತಾಲೀಮಿಗೆ ಹೋಗುತ್ತಿದೆ. ಅವರ ವಿಚಾರಗಳು ಹೀಗೆ ಪ್ರತಿ ದಿನ ಅವರೊಟ್ಟಿಗೆ ಕಾಲ ಕಳೆಯುತ್ತಿದ್ದೆ.

ಅವರು ತೀರಿಕೊಳ್ಳುವುದಕ್ಕೆ ಒಂದು ತಿಂಗಳ ಮೊದಲು ನನ್ನನ್ನು ಕರೆದು ನೀನು ಬೆಂಗಳೂರಿನಲ್ಲಿ ಇದ್ದದ್ದು ಸಾಕು ತುಮಕೂರಿಗೆ ಹೋಗಿ ರಂಗಭೂಮಿ ಕೆಲಸ ಮಾಡು’ ಎಂದರು. ತುಮಕೂರಿಗೆ ನನ್ನನ್ನು ಕಚೇರಿಯವರು ವರ್ಗಾವಣೆ ಮಾಡುವುದಿಲ್ಲ ಎಂದೆ. ಅದಕ್ಕೆ ಅವರು ಬೇರೆ ಕೆಲಸಕ್ಕಾದರೂ ಸೇರಿ ತುಮಕೂರಿಗೆ ಹೋಗು ಎಂದು ಪ್ರೀತಿಯಿಂದ ಗದರಿದರು. ಇದಾಗಿ ಒಂದೆರೆಡು ದಿವಸಗಳ ಬಳಿಕ ದಾವಣಗೆರೆಗೆ ಯಾವುದೇ ಕಾರ್ಯಕ್ರಮಕ್ಕೆ ಸಿಜಿಕೆ ಹೊರಟಿದ್ದರು. ಅವರನ್ನು ಮಾತನಾಡಿಸಲು ಗಾಂಧಿ ಭವನಕ್ಕೆ ಹೋಗಿದ್ದೆ. ತುಂಬಾ ಸುಸ್ತಾಗಿದ್ದ ಸಿಜಿಕೆ ಅವರಿಗೆ ಹುಷಾರಿಲ್ವ ಸರ್ ಎಂದೆ. ಚನ್ನಾಗಿಯೇ ಇದ್ದೀನಿ ಎಂದು ಹೊರಟು ಬಿಟ್ಟರು. ಅವರು ಹೊರಟ ಮರುದಿನವೇ ಸಿಜಿಕೆ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಸುಮಾರು 2 ವರ್ಷಗಳಿಗೂ ಹೆಚ್ಚು ಕಾಲ ಸಿಜಿಕೆ ಅವರೊಂದಿಗಿನ ಒಡನಾಟ ಅವರ ಸಾವಿನ ಮೂಲಕ ಸಿಗುವುದಿಲ್ಲ ಎಂಬ ದುಃಖದಲ್ಲಿದ್ದೆ. ಬೆಂಗಳೂರು ಸಾಕೆನಿಸಿತ್ತು. ಕಾಕತಾಳೀಯವೆಂಬಂತೆ ಕಚೇರಿಯವರು ನನ್ನನ್ನು ತುಮಕೂರಿಗೆ ವರ್ಗಾವಣೆ ಮಾಡಿದ್ದರು.

ಸಿಜಿಕೆ ನೆನಪಲ್ಲೇ ತುಮಕೂರಿಗೆ ಬಂದು ಪತ್ರಿಕೆ ಕೆಲಸದಲ್ಲಿ ತೊಡಗಿಕೊಂಡೆ. ಆಗ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಹೆಗ್ಗೋಡಿನ ನೀನಾಸಂ ನವರು ನನಗೆ ಪೋನ್ ಮಾಡಿ ಹೊಸದಾಗಿ ಮರು ತಿರುಗಾಟ ನಡೆಯುತ್ತಿದೆ. ತುಮಕೂರಿನಲ್ಲಿ ತುಂಬಾ ವರ್ಷಗಳಿಂದ ನೀನಾಸಂ ನಾಟಕಗಳೇ ಆಗಿಲ್ಲ. ನೀವು ಕರೆಸಲು ಸಾಧ್ಯವೇ ಎಂದರು. ತಕ್ಷಣ ಒಪ್ಪಿಕೊಂಡೆ. ಆಗ ಹುಟ್ಟಿಕೊಂಡಿದ್ದೆ ಝೆನ್ ಟೀಮ್. ಹೆಸರಿನಲ್ಲಿ ಟೀಮ್ ಅಂತ ಇದ್ದರು, ಇದೊಂದು ಏಕವ್ಯಕ್ತಿ ಸಂಸ್ಥೆಯಾಗಿತ್ತು. ತುಮಕೂರಿನ ಎಲಿಮೆಂಟ್ರಿ ಸ್ಕೂಲ್ ನ ಬಯಲಿನಲ್ಲಿ ವೆಂಕಟರಮಣ ಐತಾಳ್ ಅವರು ನಿರ್ದೇಶಿಸಿದ್ದ ಕನ್ನಡ ರಾಮಾಯಣ ಆಯೋಜಿಸಿದೆ. ನಿರೀಕ್ಷೆಗೂ ಮೀರಿ ನಾಟಕ ಯಶಸ್ವಿಯಾಯಿತು. ಅಲ್ಲಿಂದ ತುಮಕೂರಿನಲ್ಲಿ ಪರ್ಯಾಯ ನಾಟಕ ಪ್ರದರ್ಶಿಸಬೇಕೆಂಬ ನನ್ನ ಒಳಗುದಿಗೆ ವೇದಿಕೆ ಸಿಕ್ಕಂತಾಯಿತು. ಕಳೆದ 18 ವರ್ಷಗಳಿಂದ ನೀನಾಸಂ ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ರೆಪರ್ಟರಿ ನಾಟಕಗಳನ್ನು ಆಯೋಜಿಸಲು ಸಾಧ್ಯವಾಯಿತು. ಪ್ರತಿ ನಾಟಕ ಪ್ರದರ್ಶನದಲ್ಲೋ ಒಳ್ಳೊಳ್ಳೆ ಅನುಭವಗಳನ್ನು ಧಾರಣೆಯಾಗಿ ಪಡೆದುಕೊಂಡಿದ್ದೇನೆ. ಮಂಗಳಮುಖಿಯರನ್ನು ಕುರಿತ ಬದುಕು ಬಯಲು ದಲಿತ ಚಳವಳಿ ಕುರಿತ ನಾಟಕಗಳು ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತ ನಾಟಕಗಳನ್ನು ಆಯೋಜಿಸಲು ಸಾಧ್ಯವಾಯಿತು. ಝೆನ್ ಟೀಮ್ ನಾಟಕಗಳೆಂದರೆ ರಂಗಮಂದಿರ ಹೌಸ್ ಪುಲ್ ಆಗುತ್ತದೆ ಎಂಬ ಲೋಕರೂಢಿ ಮಾತು ಹುಟ್ಟಿಕೊಳ್ಳುವಷ್ಟು ನಮ್ಮ ತಂಡದ ನಾಟಕಗಳು ಜನಮಾನಸದಲ್ಲಿ ನೆಲೆ ನಿಂತಿತು. ರಂಗಾಯಣ, ಎನ್.ಎಸ್.ಡಿ ಸಮುದಾಯ’ ಹೀಗೆ ಎಲ್ಲಾ ಮೇಜರ್ ರೆಪರ್ಟರಿಗಳು ತುಮಕೂರಿನಲ್ಲಿ ನಾಟಕ ಪ್ರದರ್ಶಿಸಿವೆ ಎಂಬ ಹೆಗ್ಗಳಿಕೆ. ಒಟ್ಟಾರೆಯಾಗಿ ತುಮಕೂರಿನಲ್ಲಿ ಇಷ್ಟೆಲ್ಲಾ ನಾಟಕ ಪ್ರದರ್ಶಿಸಲು ನನಗೆ ಪ್ರೇರಣೆಯಾದದ್ದೇ ತಿಪಟೂರಿನ ಕಲ್ಪತರು ಹಿರಿಯ ವಿದ್ಯಾರ್ಥಿಗಳ ಸಂಘದವರು ನಡೆಸುತ್ತಿದ್ದ ರಾಜ್ಯ ಮಟ್ಟದ ನಾಟಕೋತ್ಸವಗಳು ಎಂದರೆ ತಪ್ಪಿಲ್ಲ. ಸದ್ಯ ಪರ್ಯಾಯ ನಾಟಕಗಳನ್ನು ಗ್ರಾಮಗಳಿಗೂ ತೆಗೆದುಕೊಂಡು ಹೋಗಬೇಕೆಂಬ ಕನಸನ್ನು ಹೊತ್ತಿದ್ದೇನೆ. ಅದೆಲ್ಲಾ ಸಾಕ್ಷಾತ್ಕಾರ ಮಾಡಲು ಹೊರಟಿದ್ದೇನೆ.

ತಿಪಟೂರಿನಲ್ಲಿ ಮಹಿಳಾ ವೀರಗಾಸೆ, ಮಹಿಳಾ ನಾಟಕ ತಂಡಗಳು, ಮತ್ತು ಮಸುಕಾಗಿರುವ ಕಲ್ಪತರು ಹಳೆ ವಿದ್ಯಾರ್ಥಿಗಳ ಸಂಘ, ಬೈಪ್ ಸಂಸ್ಥೆ, ಭೂಮಿ, ಇನ್ನು ಅನೇಕ ಈ ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ರಂಗ ಚಟುವಟಿಕೆಗಳ ಮೂಲಕ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಲು ಇಚ್ಚಿಸಿದ್ದೇನೆ.
ಲೇಖಕರು: ಉಗಮ ಶ್ರೀನಿವಾಸ್
ಪತ್ರಕರ್ತರು, ತುಮಕೂರು. ದೂ- 9986375670

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular