ಕಾಡುಗೊಲ್ಲರ ಅಭಿವೃದ್ದಿ ನಿಗಮವನ್ನು ನೊಂದಾಯಿಸದಂತೆ, ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ಅಡ್ಡಗಾಲಾಗಿರುವ ಹಿರಿಯೂರು ಮಾಜಿ ಶಾಸಕಿ ಪೂರ್ಣೀಮ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಅವರು ಕಾಡುಗೊಲ್ಲರ ಹೆಸರನ್ನು ತಮ್ಮ ರಾಜಕೀಯ ಅಭಿವೃದ್ದಿ ಬಳಕೆ ಮಾಡುವುದನ್ನು ಕೈ ಬಿಡಲಿ ಎಂದು ತುಮಕೂರು ಜಿಲ್ಲಾ ಕಾಡುಗೊಲ್ಲ ಅಸ್ಮಿತೆ ಹೋರಾಟ ವೇದಿಕೆ ಜಿ.ಕೆ.ನಾಗಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಗೊಲ್ಲ ಸಮುದಾಯಕ್ಕೆ ಸೇರಿದಂತೆ ಮಾಜಿ ಸಚಿವ ಎ.ಕೃಷ್ಣಪ್ಪ ಕುಟುಂಬಕ್ಕೆ ಸೇರಿದ ಪೂರ್ಣೀಮ ಶ್ರೀನಿವಾಸ ಅವರು ಮೊದಲು ತಾವು ಕಾಡುಗೊಲ್ಲರೋ, ಊರುಗೊಲ್ಲರೋ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ, ನನ್ನ ಸಮಾಜ ಎಂದು ಹೇಳುತ್ತಾ ಕಾಡುಗೊಲ್ಲರ ಹೆಸರಿನಲ್ಲಿ ಸಮಾಜವನ್ನು ದಿಕ್ಕುತಪ್ಪಿಸುತ್ತಿರುವುದರ ಜೊತೆಗೆ, ರಾಜಕೀಯ ಪಕ್ಷಗಳ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜಿಲ್ಲೆಯ 738 ಕಾಡುಗೊಲ್ಲರ ಹಟ್ಟಿಗಳ ಕಾಡುಗೊಲ್ಲರು ಸಂಪೂರ್ಣವಾಗಿ ವಿರೋಧಿಸುವುದಾಗಿ ತಿಳಿಸಿದರು.
ಕರ್ನಾಟಕದಲ್ಲಿರುವ ಕಾಡುಗೊಲ್ಲರು ಬುಡಕಟ್ಟು ಸಮುದಾಯದಕ್ಕೆ ಸೇರಿದ್ದು, ಗೊಲ್ಲ ಅಥವಾ ಯಾದವ ಸಮುದಾಯದ ಅಚಾರ ವಿಚಾರಗಳಿಗೂ, ಕಾಡುಗೊಲ್ಲರ ಆಚಾರ, ವಿಚಾರಗಳಿಗೂ ಅಜಗಜಾಂತರ ವೆತ್ಯಾಸವಿದೆ. ಗೊಲ್ಲ ಮತ್ತು ಕಾಡುಗೊಲ್ಲರ ನಡುವೆ ಕೊಡು, ಕೊಳ್ಳುವಿಕೆಯ ಸಂಬಂಧಗಳಿಲ್ಲ. ಹೀಗಿದ್ದರೂ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಕಾಡುಗೊಲ್ಲರ ಹೆಸರು ಹೇಳುತ್ತಿರುವುದು ನಿಜಕ್ಕೂ ನಾಚಿಕೇಗೇಡಿನ ಸಂಗತಿ ಎಂದರು.
ವಯುಕ್ತಿಕವಾಗಿ ಅವರು ಯಾವುದೇ ಪಕ್ಷಕ್ಕೆ ಹೋಗಲಿ ನಮ್ಮ ಅಭ್ಯಂತರವಿಲ್ಲ. ತಮ್ಮ ರಾಜಕೀಯ ಅಧಿಕಾರ, ಹಣ ಬಲದಿಂದ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲರನ್ನು ಅಭಿವೃದ್ದಿಗೆ ಅಡ್ಡಗಾಲಾಗದಿರಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ತಮ್ಮ ರಾಜಕೀಯ ಆಸ್ಥಿತ್ವಕ್ಕಾಗಿ ಪೂರ್ಣೀಮ ಶ್ರೀನಿವಾಸ್ ಅವರು ಗೊಲ್ಲರಾಗಿದ್ದುಕೊಂಡು, ಕಾಡುಗೊಲ್ಲರ ಹೆಸರು ಹೇಳುತ್ತಿದ್ದಾರೆ. ಆದರೆ ಇವರೇ 2020ರ ಶಿರಾ ಉಪಚುನಾವಣೆ ವೇಳೆ ಸರ್ಕಾರ ಸ್ಥಾಪಿಸಿದ ಕಾಡುಗೊಲ್ಲ ಅಭಿವೃದ್ದಿ ನಿಗಮ ಇದುವರೆಗೂ ನೊಂದಾವಣೆಯಾಗಲು ಅವಕಾಶ ನೀಡಿಲ್ಲ ಎಂದು ದೂರಿದರು.
ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಬೇಕೆಂಬ ಕಾಡುಗೊಲ್ಲರ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯದಲ್ಲಿ ಕಾಡುಗೊಲ್ಲರೇ ಇಲ್ಲ ಎಂದು ತಮ್ಮ ಹಿಂಬಾಲಕರ ಮೂಲಕ ಕೇಂದ್ರ ಸರ್ಕಾರಕ್ಕೆ ತಕರಾರು ಅರ್ಜಿ ಸಲ್ಲಿಸುವ ಕೆಲಸ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಜಿ.ಕೆ.ನಾಗಣ್ಣ, ಕಾಡುಗೊಲ್ಲರು ತಮ್ಮ ನಿರಂತರ ಹೋರಾಟದ ಫಲವಾಗಿ ಕಾಡುಗೊಲ್ಲ ಎಂಬ ಜಾತಿ ಸರ್ಟಿಪಿಕೇಟ್ ಪಡೆಯುವಂತಾಗಿದೆ.ಕೇಂದ್ರದ ಪರಿಶಿಷ್ಟ ಪಂಗಡ ಜಾತಿ ಪಟ್ಟಿಗೆ ಸೇರ್ಪಡೆಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಎಂದಿಗೂ ಈ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಪೂರ್ಣೀಮ ಶ್ರೀನಿವಾಸ್, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ತಮ್ಮ ಪತಿಗೆ ಕಾಂಗ್ರೆಸ್ ಪಕ್ಷದ ಟಿಕೇಟ್ ದೊರಕಿಸಲು ಈ ರೀತಿಯ ಸುಳ್ಳು ಹೇಳುತ್ತಿರುವುದು ತರವಲ್ಲ ಎಂದರು.
ತುಮಕೂರು ಜಿಲ್ಲೆ ಕಾಡುಗೊಲ್ಲ ಮುಖಂಡರ ವೇದಿಕೆಯ ಅಧ್ಯಕ್ಷ ಜಿ.ಎಂ.ಈರಣ್ಣ, ಕಳೆದ ಚುನಾವಣೆಯಲ್ಲಿ ಕಾಡುಗೊಲ್ಲರು ಕಾಂಗ್ರೆಸ್ ಪಕ್ಷದ ಪರ ನಿಂತಿದ್ದಾರೆ. ಇದಕ್ಕೆ ತಾಜ ನಿರ್ದೇಶನವೆಂದರೆ ಹಿರಿಯಾರು ಕ್ಷೇತ್ರ. ಮಾಜಿ ಶಾಸಕಿ ಪೂರ್ಣೀಮ ಅವರೊಂದಿಗೆ ಕಾಡುಗೊಲ್ಲರು ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅಧಿಕಾರದಲ್ಲಿದ್ದ ಇದ್ದಾಗಲೂ ಸಮುದಾಯಕ್ಕೆ ನ್ಯಾಯ ಒದಗಿಸದ ಕೆಲ ನಿವೃತ್ತ ಅಧಿಕಾರಿಗಳು ಕಾಡುಗೊಲ್ಲ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹವಣಿಸುತಿದ್ದು, ಇವಂತಹವರನ್ನು ಪಕ್ಷ ದೂರ ಇಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಗೋಷ್ಟಿಯಲ್ಲಿ ರಮೇಶ್, ಗೋವಿಂದರಾಜು, ಚಿನ್ನಪ್ಪ, ಚರಣ್, ಪಣಿರಾಜ್ ಉಪಸ್ಥಿತರಿದ್ದರು.