ಹಿರಿಯ ಪತ್ರಕರ್ತ, ಮಲಯಾಳ ಮನೋರಮಾ ಮತ್ತು ದಿ ವೀಕ್ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದಾರೆ.
ಬಿ.ಕೆ.ಹರಿಪ್ರಸಾದ್ ಸಂತಾಪ
ಬಹು ಕಾಲದ ನನ್ನ ದೆಹಲಿಯ ಒಡನಾಡಿಯಂತಿದ್ದ ಹಿರಿಯ ಪತ್ರಕರ್ತರಾದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಂಬನಿ ಮಿಡಿದಿದ್ದಾರೆ.
ದೆಹಲಿಯಲ್ಲಿ ಸದಾ ನನ್ನೊಂದಿಗೆ ಹಲವು ವಿಷಯಗಳ ಬಗ್ಗೆ ಪರಿಪಕ್ವ ಚರ್ಚೆ,ಸಂವಾದಗಳು ನಡೆಸುತ್ತಿದ್ರು. ಅವರ ಸಾವು ಇಡೀ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಅವರ ಸಾವು ಮತ್ತು ನೊಂದ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿ ಸಂತಾಪ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿರಿಯ ಪತ್ರಕರ್ತರಾದ ಸಚ್ಚಿದಾನಂದ ಮೂರ್ತಿ ಅವರ ಸಾವಿನ ಸುದ್ದಿ ಕೇಳಿ ಹೃದಯ ಭಾರವಾಗಿದೆ ಎಂದಿದ್ದಾರೆ.
ಮಲಯಾಳಂ ಮನೋರಮಾ, ದಿ ವೀಕ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಸಚ್ಚಿದಾನಂದಮೂರ್ತಿ ಅವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.