ದೇಶದ ಚುಕ್ಕಾಣಿ ಹಿಡಿದಿರುವ, ಜನರ ಕಷ್ಟಗಳನ್ನು ನಿವಾರಿಸಬೇಕಾದ ಪ್ರಧಾನಿಗಳು ಮೌನವಾಗಿದ್ದಾರೆ. ಜಾತಿ ಸಮೀಕ್ಷೆಗೆ ಹಾಗೂ ಜನಗಣತಿಗೆ ಮಾಡಿ ಎಂದರೆ ಮೌನವಾಗಿ ಕುಳಿತುಕೊಂಡಿದ್ದಾರೆ. ದೇಶದಲ್ಲಿ ಮೀಸಲಾತಿ ತಂದ ವೇಳೆ ಇಡೀ ಸಮಾಜವನ್ನು ಒಡೆದು ಆಳಲು ಮುಂದಾಗಿದ್ದವರು ಬಿಜೆಪಿಗರು. ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ಎಂದಿಗೂ ನಂಬಿಕೆ ಇಲ್ಲ, ಜೊತೆಗೆ ಮಹಿಳಾ ಮೀಸಲಾತಿಯ ಬಗ್ಗೆ ಕಿಂಚಿತ್ತೂ ನಂಬಿಕೆ ಇಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸ್ಪಷ್ಟವಾಗಿ ಹೇಳಿದೆ. ಈಗ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಎಲ್ಲಾ ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ಜನರನ್ನು ಒಡೆದು ಆಳುವ ನೀತಿ ಇರುವುದು ಜೆಡಿಎಸ್ ಮತ್ತು ಬಿಜೆಪಿಗೆ ಮಾತ್ರ ಎಂದು ಟೀಕಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ರಾಜಕೀಯ ಕಾರಣಗಳಿಗೆ ಕಲ್ಪಿಸಲಾಯಿತು. ಈ ಮೀಸಲಾತಿಯನ್ನು ನೀಡಲು ಒಂದು ಅಧ್ಯಯನ ಮಾಡಬೇಕಿತ್ತು, ಯಾವ, ಯಾವ ಜಾತಿಗಳು ಹೇಗೆ ಹಿಂದುಳಿದಿದ್ದಾರೆ ಎನ್ನುವ ಅಂಕಿ-ಅಂಶ ಎಲ್ಲಿದೆ. ಆದರೆ ಮಹಿಳಾ ಮೀಸಲಾತಿಗೆ ಮಾತ್ರ ಸಮೀಕ್ಷೆ ಬೇಕು ಎಂದು ಹೇಳುತ್ತಾರೆ ಎಂದರು.
ಈಗ ತಾನೇ ಬಿಜೆಪಿ ಜೊತೆ ಕೈ ಜೋಡಿಸಿರುವ ಜೆಡಿಎಸ್ ಇತಿಹಾಸವನ್ನು ಕೆದಕಿದರೆ ಸತ್ಯ ಹೊರಗೆ ಬರುತ್ತದೆ. ಹಾವನೂರು ವರದಿ, ವೆಂಕಟಸ್ವಾಮಿ ಆಯೋಗ, ಓ. ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ದ ಇದ್ದವರು ಜೆಡಿಎಸ್ ನವರು. ಆದರೆ ಈಗ ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ದೆ ಆಯೋಗದ ವರದಿ ಹೊರಗೆ ಬಂದರೆ ಅನ್ಯಾಯ ಆಗುತ್ತದೆ ಎಂದು ಹೇಳಿದ್ದಾರೆ.
ಅನೇಕ ಸಮುದಾಯಗಳು ಅನೇಕ ವರ್ಷಗಳಿಂದ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತಿದ್ದಾರೆ. ಹಿಂದುಳಿದ, ಅತಿ ಹಿಂದುಳಿದ, ಎಸ್ಟಿ, ಎಸ್ಸಿ ಹೀಗೆ ಅನೇಕ ವರ್ಗಗಳಿಗೆ ಅನೇಕ ಜಾತಿಗಳು ಬಡ್ತಿ ಪಡೆಯಲು ಕಾಯುತ್ತಿವೆ. ಸಂವಿಧಾನದ ಅರ್ಟಿಕಲ್ 341 ಪ್ರಕಾರ ಎಸ್ಟಿ, 342 ಪ್ರಕಾರ ಎಸ್ಟಿ, 340 ಪ್ರಕಾರ ಹಿಂದುಳಿದಿದ್ದರೆ ಅವರಿಗೆ ಓಬಿಸಿ ಎಂದು ಪರಿಗಣಿಸಲಾಗಿದೆ. ಇದನ್ನು ವಿಂಗಡಿಸಲು ಸಾಕಷ್ಟು ಅಧ್ಯಯನ ಒಳಗೊಂಡ ಸಮೀಕ್ಷೆ ಬೇಕಾಗುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಸಾಮಾಜಿಕ ನ್ಯಾಯ, ಮೀಸಲಾತಿ ಬಗ್ಗೆ ಎಂದಿಗೂ ನಂಬಿಕೆ ಇಲ್ಲ. ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಯಾವ, ಯಾವ ಸಮುದಾಯಗಳು ಇವೆ ಎನ್ನುವುದರ ಕುರಿತು ಸಮೀಕ್ಷೆ ನಡೆಯಬೇಕು. 1901, 1931 ರಲ್ಲಿ ಸಮೀಕ್ಷೆ ನಡೆದಿರುವುದು ಬಿಟ್ಟರೆ ಆನಂತರ ಸಮೀಕ್ಷೆ ಆಗಿಲ್ಲ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 2013-18 ಸಾಲಿನಲ್ಲಿ 168 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ, ಎಲ್ಲಾ ಜಾತಿಗಳ ಸಮೀಕ್ಷೆ ಮಾಡಿಸಿತು ಎಂದರು.
ಬಿಹಾರದಲ್ಲಿ ಇದೇ ರೀತಿಯ ಸಮೀಕ್ಷೆ ನಡೆದು ವರದಿ ಹೊರಗೆ ಬಂದ ನಂತರ ಪಾಟ್ನಾ ಹೈಕೋರ್ಟಿನಲ್ಲಿ ಒಂದಷ್ಟು ಜನ ಪ್ರಕರಣ ಹೂಡುತ್ತಾರೆ. ಕೋರ್ಟ್ ಕೂಡ ಹೇಳಿದೆ ಜಾತಿ ಸಮೀಕ್ಷೆ ಮಾಡುವುದು ಸಂವಿಧಾನ ಬಾಹಿರ ಅಲ್ಲ ಎಂದು. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿದಾಗ ಅಲ್ಲಿಯೂ ಸಹ ಬಿಹಾರ ಹೈಕೋರ್ಟಿನ ಆದೇಶ ಸಂವಿಧಾನ ಬದ್ದವಾಗಿದೆ, ಅದಕ್ಕೆ ತಡೆ ನೀಡಲು ಬರುವುದಿಲ್ಲ ಎಂದಿದೆ ಎಂದು ತಿಳಿಸಿದರು.
ಶೀಘ್ರವೇ ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಹಾಗೂ ಅದರಲ್ಲಿ ಓಬಿಸಿ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಹೇಳಿದೆ. ಮೀಸಲಾತಿಯನ್ನ ತಕ್ಷಣ ನೀಡಲು ಆಗುವುದಿಲ್ಲ, ಮೊದಲಿಗೆ ಜನಗಣತಿ ಆಗಬೇಕು ಎಂದು ಬಿಜೆಪಿ ಹೇಳುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ 2026 ರ ತನಕ ಕ್ಷೇತ್ರ ಪುನರ್ವಿಂಗಡಣೆ ಆಗಬಾರದು ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಇದರ ಪ್ರಕಾರ 2031 ರಲ್ಲಿ ಜನಗಣತಿ ನಡೆಯುತ್ತದೆ, ಅದು ಮುಗಿಯುವ ಹೊತ್ತಿಗೆ 2035 ಅಂದರೆ ಮೀಸಲಾತಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಬಿಜೆಪಿ ಎಂದು ಆರೋಪಿಸಿದರು.