ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ಎರಡೂ ಪಕ್ಷದ ನಾಯಕರಲ್ಲಿ ಕಸಿವಿಸಿ ಉಂಟುಮಾಡಿದ್ದು ರಾಜ್ಯಾದ್ಯಂತ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಅವರು ಮಾತನಾಡಿದರು.
ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಪ್ಪ ಲಮಾಣಿ ಹಾಗೂ ಅವರ ಬೆಂಬಲಿಗರು ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿಯಿಂದ 40 ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲು ಅರ್ಜಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ಎಚ್ ಕೆ ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಬಿ ಎನ್ ಚಂದ್ರಪ್ಪ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.