ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಮಾಜಿ ಎಂಎಲ್.ಸಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ರಣವೀರ್ ನಂದನ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಸಂಘಟನೆಯಲ್ಲಿ ಅವರು ಹೊಂದಿದ್ದ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ.
ರಣವೀರ್ ನಂದನ್ ರಾಜಿನಾಮೆ ನೀಡಿರುವುದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಷ್ಟ್ರೀಐ ಲೋಕ ಜನತಾ ದಳ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಜೆಡಿಯು ನಾಯಕರು ತಮ್ಮ ಪಕ್ಷ ಮತ್ತು ಬಿಜೆಪಿ ಸೇರಿ ಇತರ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡ ಕೆಲವೇ ಗಂಟೆಗಳ ನಂತರ ರಾಜಿನಾಮೆ ನೀಡಿದ್ದಾರೆ.
ಜೆಡಿಯುನ ಕೆಲವು ಉನ್ನತ ನಾಯಕರಿಂದ ನಂದನ್ ಅವರನ್ನು ಅವಮಾನಿಸಿದ್ದಾರೆ ಎಂದು ಹೇಳಲಾಗಿದ್ದು ಇದರಿಂದ ಬೇಸತ್ತ ರಣವೀರ್ ನಂದನ್ ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜಿನಾಮೆ ನೀಡಿದ್ದಾರೆ. ಅವರು ನೇರವಾಗಿಯೇ ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಮತ್ತು ನಿತೀಶ್ ಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ಕಳುಹಿಸಿದ್ದಾರೆ.
ನಿತೀಶ್ ಕುಮಾರ್ ಅವರ ಆಪ್ತರಲ್ಲಿ ಒಬ್ಬರಾಗಿದ್ದ ನಂದನ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.
ನಂದರ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಪಕ್ಷದ ಮುಖ್ಯಸ್ಥರ ವಿರುದ್ಧ ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು ಆ ಕಾರಣಕ್ಕಾಗಿ ರಣವೀರ್ ನಂದನ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಜೆಡಿಯು ಪಕ್ಷದ ಮುಖ್ಯಸ್ಥ ಉಮೇಶ್ ಕುಶ್ವಾ ಸ್ಪಷ್ಟಪಡಿಸಿದ್ದಾರೆ.